ಅಮೃತಸರ/ಪಂಜಾಬ್: ದಸರಾ ಪ್ರಯುಕ್ತ ನಡೆಯುತ್ತಿದ್ದ ರಾವಣ ಪ್ರತಿಕೃತಿ ದಹನ ವೀಕ್ಷಿಸಲು ರೈಲು ಹಳಿಯ ಮೇಲೆ ನಿಂತಿದ್ದ ಜನರ ಗುಂಪಿನ ಮೇಲೆ ಶುಕ್ರವಾರ ಸಂಜೆ ರೈಲು ಹರಿದು ಕನಿಷ್ಠ 61ಮಂದಿ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.
ರೈಲು ಹಳಿ ಪಕ್ಕದಲ್ಲಿರುವ ಜೋದಾ ಪಾಠಕ್ ಮೈದಾನದಲ್ಲಿ ರಾವಣನ ಪ್ರತಿಕೃತಿ ದಹನ ವೀಕ್ಷಿಸಲು 700ಕ್ಕೂ ಹೆಚ್ಚು ಜನರು ಸೇರಿದ್ದರು. ಹಳಿಗಳ ಮೇಲೆ ನಿಂತಿದ್ದ ಜನರಿಗೆ ಜೋರಾದ ಪಟಾಕಿಗಳ ಸದ್ದಿನಿಂದಾಗಿ ರೈಲು ಬಂದದ್ದು ಗೊತ್ತಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಏಕಕಾಲಕ್ಕೆ ಎದುರು ಬದುರಿನಿಂದ ಎರಡು ರೈಲು ಬಂದಿದ್ದರಿಂದ ತಪ್ಪಿಸಿಕೊಳ್ಳಲು ಜನರಿಗೆ ಸಾಧ್ಯವಾಗಲಿಲ್ಲ. ಜಲಂಧರ್‌ನಿಂದ ಅಮೃತಸರಕ್ಕೆ ಬರುತ್ತಿದ್ದ ರೈಲು ಜನರ ಗುಂಪಿನ ಮೇಲೆ ನುಗ್ಗಿತು.
ರೈಲು ಗುದ್ದಿದ ರಭಸಕ್ಕೆ ಅನೇಕರ ದೇಹಗಳು ಛಿದ್ರವಾಗಿದ್ದು, ಹಳಿಗಳ ಅಕ್ಕಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. 72 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.
ಆ ಪೈಕಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
₹5ಲಕ್ಷ ಪರಿಹಾರ ಘೋಷಣೆ
ಮೃತರ ಕುಟುಂಬಗಳಿಗೆ ಪಂಜಾಬ್ ಸರ್ಕಾರ ₹5 ಲಕ್ಷ ಪರಿಹಾರ ಘೋಷಿಸಿದೆ. ಅಪಘಾತಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಕೇಂದ್ರದಿಂದ ಎಲ್ಲ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ ಸಿಂಗ್ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.