ಬೆಂಗಳೂರು:ಸಂಸತ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ಸಂಗತಿ ವ್ಯಾಪಕ ಚರ್ಚೆಯಾಗಿದೆ. ಜತೆಗೆ, ಹಾಸ್ಯದ ಸರಕೂ ಆಗಿದೆ. ರಾಹುಲ್ ಅಪ್ಪುಗೆ ಪಡೆದ ಮೋದಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳೂವುದು ಒಳಿತು ಎಂಬ ಸಲಹೆಗಳೂ ಬಂದಿವೆ.
ಈ ನಡುವೆ ಅಮೂಲ್ ಪ್ರಕಟಿಸಿರುವ ರಾಹುಲ್ ಮೋದಿ ಅಪ್ಪುಗೆಯ ಕಾರ್ಟೂನ್ ಟ್ರೋಲ್ ಆಗಿ ಸದ್ದು ಮಾಡಿದೆ.
ರಾಹುಲ್ ಮೋದಿ ಅವರನ್ನು ಅಪ್ಪಿಕೊಂಡು ಕಣ್ಣೊಡೆದಿರುವಂತೆಯೂ, ಈ ವೇಳೆ ಮೋದಿ ಆಶ್ಚರ್ಯ ವ್ಯಕ್ತಪಡಿಸಿದಂತೆ ತೋರುವ ಕಾರ್ಟೂನ್‌ಅನ್ನು ಚಿತ್ರಿಸಲಾಗಿದೆ.
‘ಅಪ್ಪುಗೆಯೇ?ಮುಜುಗರವೇ?’ ಎಂಬ ಶೀರ್ಷಿಕೆ ನೀಡಿದ್ದು, 'ಪ್ರತಿದಿನ ಅಪ್ಪುಗೆಯ ಬ್ರೆಡ್!’ ಎಂದು ಉಲ್ಲೇಖಿಸಲಾಗಿದೆ.
ರಾಹುಲ್ ಗಾಂಧಿಗೆ ಅಭಿನಂದನೆಗಳು! #Hug-gies ಬ್ರಾಂಡ್ ಅಂಬಾಸಿಡರ್ ಆಯ್ಕೆಗೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು ಪಪ್ಪು ಜೋಕ್ಸ್ ಹೆಚ್ಚು ರುಚಿಯಾಗಿದೆ ಎಂದೂ, ಮಗಗದೊಬ್ಬರು ಪಪ್ಪು ಜೋಕ್ಸ್ ಎಂದರೆ ‘ಟೋಸ್ಟ್’ ಎಂದರ್ಥ ಎಂದು ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.
ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವ ವಿಚಾರದಲ್ಲಿ ಯಾವುದೇ ಹಿಂಜರಿಕೆ ತೋರದ ನರೇಂದ್ರ ಮೋದಿ ಅವರು ಸದನದಲ್ಲಿ ರಾಹುಲ್ ಗಾಂಧಿ ಅವರ ಅನಿರೀಕ್ಷಿತ ಅಪ್ಪುಗೆಯಿಂದ ತಬ್ಬಿಬ್ಬಾಗಿದ್ದರು. ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮೋದಿ ಅವರನ್ನು ರಾಹುಲ್ ಅಪ್ಪಿಕೊಂಡದ್ದು ಲೋಕಸಭೆಯಲ್ಲಿ ನಾಟಕೀಯ ಸನ್ನಿವೇಶ ಸೃಷ್ಟಿಸಿತ್ತು.
‘ಏಳಿ, ಬೇಗ ಎದ್ದೇಳಿ’
ರಾಹುಲ್ ಗಾಂಧಿ ಅವರು ಮೋದಿ ಅವರ ಬಳಿ ಬಂದು ‘ಏಳಿ, ಬೇಗ ಎದ್ದೇಳಿ’ ಎಂದು ಕೇಳಿಕೊಂಡ ಮಾತಿಗೆ ನರೇಂದ್ರ ಮೋದಿ, ‘ವಿಶ್ವಾಸ ಮೇಲಿನ ಮತದಾನ ಇನ್ನೂ ಮುಗಿದಿಲ್ಲ. ಬೆಳಿಗ್ಗೆ, ಮಾತನಾಡಿದ ಸದಸ್ಯರಾದ ರಾಹುಲ್ ನನ್ನನ್ನು ತಬ್ಬಿಕೊಳ್ಳಲು ಬಂದರು. ಆಗ, ‘ಏಳಿ, ಬೇಗ ಎದ್ದೇಳಿ’ ಎಂದು ಅವಸರ ಮಾಡಿದರು. ನನ್ನನ್ನು ಪ್ರಧಾನಿ ಕುರ್ಚಿಯಿಂದ ಎಬ್ಬಿಸಲು ಅವರು ಅತ್ಯಂತ ಅವಸರದಲ್ಲಿದ್ದಂತೆ ಕಾಣುತ್ತದೆ’ ಎಂದು ನಗುತ್ತಲೇ ರಾಹುಲ್ ಅವರನ್ನು ಛೇಡಿಸಿದ್ದರು, ‘ದೇಶದ ಜನರು ಚುನಾಯಿಸಿ ಇಲ್ಲಿ ಕೂರಿಸಿದ್ದಾರೆ. ಇಲ್ಲಿಂದ ಎದ್ದೇಳಿಸಲು ನಿಮ್ಮಿಂದಾಗದು' ಎಂದು ಮೋದಿ ತಿರುಗೇಟನ್ನೂ ನೀಡಿದ್ದರು.
* ಇವನ್ನೂ ಓದಿ..,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.