ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಕೇಂದ್ರೀಯ ಕಾಯ್ದೆ ಅನ್ವಯ ಸ್ಥಾಪಿಸಲಾಗಿದೆ ಎಂಬ ಕಾರಣ ನೀಡಿ, ಅದಕ್ಕಿದ್ದ ಅಲ್ಪಸಂಖ್ಯಾತ ಸಂಸ್ಥೆ ಸ್ಥಾನಮಾನವನ್ನು ತೆಗೆದು ಹಾಕಿ 1967ರಲ್ಲಿ ಐವರು ಸದಸ್ಯರ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಈ ತೀರ್ಪಿನಿಂದಾಗಿ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಹೊಂದಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನಮಾನ ಮುಂದುವರಿದಂತಾಗಿದೆ.
‘ಎಎಂಯುಗೆ ಇರುವ ಅಲ್ಪಸಂಖ್ಯಾತ ಸಂಸ್ಥೆ ಸ್ಥಾನಮಾನ ಕುರಿತಂತೆ, ಈ ಪೀಠವು ನೀಡಿರುವ ತತ್ವಗಳ ಆಧಾರದಲ್ಲಿ ನಿರ್ಣಯಿಸುವುದು ಸಾಮಾನ್ಯ ಪೀಠಕ್ಕೆ ಬಿಟ್ಟದ್ದು’ ಎಂದು ಪೀಠ ಹೇಳಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಸದಸ್ಯರು ಇರುವ ಪೀಠವು, 4:3ರ ಬಹುಮತದ ತೀರ್ಪು ನೀಡಿದೆ.
‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯನ್ನು ಅಲ್ಪಸಂಖ್ಯಾತರು ಸ್ಥಾಪಿಸಬಹುದು. ಆದರೆ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರೇ ಅದರ ಆಡಳಿತ ನಿರ್ವಹಣೆ ಮಾಡುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಪರವಾಗಿ ಸಿಜೆಐ ಚಂದ್ರಚೂಡ್ ಅವರು ಬಹುಮತದ ತೀರ್ಪು ಬರೆದಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ, ದೀಪಂಕರ್ ದತ್ತ ಅವರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ, ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ಕೂಡ ಪ್ರತ್ಯೇಕ ತೀರ್ಪು ನೀಡಿದ್ದು, ಬಹುಮತದ ತೀರ್ಪನ್ನು ಅನುಮೋದಿಸಿಯೂ ಇಲ್ಲ ಅಥವಾ ಅದಕ್ಕೆ ಅಸಮ್ಮತಿಯನ್ನೂ ಸೂಚಿಸಿಲ್ಲ.
‘ಎಎಂಯು ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ. ಹೀಗಾಗಿ ಇದನ್ನು ಅಲ್ಪಸಂಖ್ಯಾತ ಸಂಸ್ಥೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಅಜೀಜ್ ಬಾಷಾ ವರ್ಸಸ್ ಕೇಂದ್ರ ಸರ್ಕಾರ ಪ್ರಕರಣದಲ್ಲಿ 1967ರಲ್ಲಿ ಐವರು ಸದಸ್ಯರ ಸಂವಿಧಾನಪೀಠವು ತೀರ್ಪು ನೀಡಿತ್ತು.
‘ಇದೇ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್ 2006ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕೂಡ ಸಾಮಾನ್ಯ ಪೀಠ ನಡೆಸುವುದು. ಹೀಗಾಗಿ, ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾಮಾನ್ಯ ಪೀಠದ ಮುಂದೆ ಮಂಡಿಸಬೇಕು’ ಎಂದು ಸಿಜೆಐ ಸೂಚಿಸಿದರು.
‘ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಸ್ಥಾನಮಾನ ನೀಡಿರುವುದರ ಕುರಿತು ಎದ್ದಿರುವ ಪ್ರಶ್ನೆಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಹೊಸ ಪೀಠದ ಮುಂದೆ ತನ್ನ ‘ದೃಢ’ ನಿಲುವು ಮಂಡಿಸಲಿದೆ’ ಎಂದು ಬಿಜೆಪಿ ಶುಕ್ರವಾರ ಹೇಳಿದೆ. ಈ ವಿಷಯ ಕುರಿತ ಅರ್ಜಿಯನ್ನು ಹೊಸ ಪೀಠಕ್ಕೆ ವಹಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ. ‘ಸಂವಿಧಾನದಲ್ಲಿನ ಅವಕಾಶಗಳನ್ನು ವ್ಯಾಖ್ಯಾನಿಸುವುದು ಸುಪ್ರೀಂ ಕೋರ್ಟ್‌ನ ಮೂಲಭೂತ ಕರ್ತವ್ಯ. ಅದರಂತೆಯೇ ಅದು ತೀರ್ಪು ನೀಡಿದೆ. ಈ ವಿಚಾರದಲ್ಲಿ ಕಕ್ಷಿದಾರ ಕೂಡ ಆಗಿರುವ ಕೇಂದ್ರ ಸರ್ಕಾರ ತನ್ನ ಪ್ರಬಲ ವಾದ ಮಂಡನೆ ಮಾಡಲಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಾಳವೀಯ ಪ್ರತಿಕ್ರಿಯೆ: ಬಿಜೆಪಿಯ ಐ.ಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರೂ ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು ಅಲಿಗಢ ಮುಸ್ಲಿಂ ವಿ.ವಿ ಗೆ ಅಲ್ಪಸಂಖ್ಯಾತ ಸಂಸ್ಥೆ ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಾಜಿ ಶಿಕ್ಷಣ ಸಚಿವ ಎಸ್.ನೂರಲ್ ಹಸನ್ ಡಿಎಂಕೆಯ ಮಾಜಿ ಸಂಸದ ಸಿ.ಟಿ.ದಂಡಪಾಣಿ ಹಾಗೂ ಬಾರಾಮುಲ್ಲಾದ ಆಗಿನ ಕಾಂಗ್ರೆಸ್ ಸಂಸದ ಸೈಯದ್ ಅಹ್ಮದ್ ಆಗಾ ನೀಡಿದ್ದ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿಕ್ರಿಯೆಗಳು ಈ ತೀರ್ಪು ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಎಎಂಯು ವಿಷಯದಲ್ಲಿ ಸಿಕ್ಕ ದೊಡ್ಡ ಜಯ. ವಿ.ವಿ. ಸ್ಥಾಪನೆಗೆ ಕಾರಣವಾದ ಮೂಲಭೂತ ತತ್ವಗಳನ್ನು ಈ ತೀರ್ಪು ಮತ್ತೊಮ್ಮೆ ದೃಢೀಕರಿಸಿದೆ –ಪ್ರೊ.ಫೈಜಾನ್ ಮುಸ್ತಫಾ ಅಲಿಗಢ ವಿ.ವಿ ಮಾಜಿ ರಿಜಿಸ್ಟ್ರಾರ್ ಹಾಗೂ ಸಾಂವಿಧಾನಿಕ ಕಾನೂನು ತಜ್ಞ ಅಲಿಗಢ ವಿ.ವಿ ಸ್ಥಾಪನೆ ಮಾಡಿದ ಸಂಘಟನೆಗಳು ಹಾಗೂ ವ್ಯಕ್ತಿಗಳ ಅನನ್ಯತೆ ಹಾಗೂ ಅವರ ಉದ್ದೇಶ ಕುರಿತ ಚಾರಿತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣದ ಇತ್ಯರ್ಥವಾಗಬೇಕು ಎಂಬುದು ಎಎಂಯು ಸಮುದಾಯದ ನಿಲುವಾಗಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪು ನಮ್ಮ ವಾದವನ್ನು ಎತ್ತಿ ಹಿಡಿದಿದೆ –ಡಾ.ರಾಹತ್ ಅಬ್ರಾರ್ ಉರ್ದು ಅಕಾಡೆಮಿ ಮಾಜಿ ನಿರ್ದೇಶಕ ಎಎಂಯು ವಿ.ವಿ ಸ್ಥಾಪನೆಯ ಹಿಂದಿರುವ ಉದ್ದೇಶವನ್ನು ಈ ತೀರ್ಪು ಮತ್ತೊಮ್ಮೆ ದೃಢಪಡಿಸಿದೆ. ಸಮಾಜದ ಎಲ್ಲ ವರ್ಗಗಳಿಗೆ ಶಿಕ್ಷಣ ಒದಗಿಸುವಂತಹ ಒಳಗೊಳ್ಳುವಿಕೆಯ ವಾತಾವರಣ ನಿರ್ವಹಿಸಲು ಇದು ಪೂರಕವಾಗಲಿದೆ –ಮೊಹಮ್ಮದ್ ಒಬೇದ್ ಸಿದ್ದೀಕಿ ಎಎಂಯು ಶಿಕ್ಷಕರ ಸಂಘದ ಕಾರ್ಯದರ್ಶಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು ಹಾಗೂ ವಿ.ವಿಯನ್ನು ಬೆಂಬಲಿಸಬೇಕು – ಅಸಾದುದ್ದೀನ್ ಒವೈಸಿ. ಎಐಎಂಐಎಂ ಮುಖ್ಯಸ್ಥ
ಎಎಂಯು ಅನ್ನು ಸಂಸತ್‌ನ ಕಾಯ್ದೆ ಮೂಲಕ ಸ್ಥಾಪಿಸಲಾಗಿದೆ ಎಂದ ಮಾತ್ರಕ್ಕೆ ಅದರ ಅಲ್ಪಸಂಖ್ಯಾತ ಗುಣಲಕ್ಷಣಕ್ಕೆ/ಸ್ಥಾನಮಾನಕ್ಕೆ ಧಕ್ಕೆ ಆಗುವುದಿಲ್ಲ. ವಿ.ವಿಯ ಸ್ಥಾಪನೆ ಕುರಿತಾದ ಇತರ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ
ಕಾಲೇಜೊಂದನ್ನು ವಿಶ್ವವಿದ್ಯಾಲಯವಾಗಿ ಪರಿವರ್ತನೆ ಮಾಡಿದ ಸಂದರ್ಭದಲ್ಲಿ ಆ ಸಂಸ್ಥೆ ಹೊಂದಿದ್ದ ಅಲ್ಪಸಂಖ್ಯಾತ ಸ್ಥಾನಮಾನವನ್ನು ತೆಗೆದು ಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಆಡಳಿತ ಅಲ್ಪಸಂಖ್ಯಾತ ಸಮುದಾಯದ ಬಳಿಯೇ ಇರಬೇಕು ಎಂದೇನಿಲ್ಲ. ಇದೇ ವೇಳೆ ಸಂಸ್ಥೆಯು ಅಲ್ಪಸಂಖ್ಯಾತ ಗುಣಲಕ್ಷಣ ಕಳೆದುಕೊಂಡಿದೆಯೇ ಹಾಗೂ ಅದು ಕೇವಲ ಅಲ್ಪಸಂಖ್ಯಾತರ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯು ಜಾತ್ಯತೀತ ಶಿಕ್ಷಣಕ್ಕೆ ಒತ್ತು ನೀಡಬಹುದು. ಈ ಉದ್ದೇಶ ಈಡೇರಿಕೆಗಾಗಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಆಡಳಿತದಲ್ಲಿ ಇರುವ ಅಗತ್ಯವಿಲ್ಲ
ಸಂವಿಧಾನದ 30(1) ವಿಧಿಯಲ್ಲಿ ಉಲ್ಲೇಖಿಸಿರುವಂತೆ ಸಮುದಾಯದ ಶಿಕ್ಷಣಕ್ಕಾಗಿ ಸ್ಥಾಪಿಸಿರುವ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆ ಎಂಬುದನ್ನು ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರು ಸಾಬೀತುಪಡಿಸಬೇಕು. ಈ ವಿಧಿಯಡಿ ಖಾತ್ರಿಪಡಿಸಲಾಗಿರುವ ಹಕ್ಕು ಸಂವಿಧಾನ ಜಾರಿಗೆ ಬರುವ ಮುನ್ನ ಸ್ಥಾಪಿಸಲಾಗಿರುವ ವಿಶ್ವವಿದ್ಯಾಲಯಳಿಗೆ ಅನ್ವಯವಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.