ADVERTISEMENT

ವಿಷ ಉಣಿಸಿ ಮನೆ ಬಿಟ್ಟು ಹೋಗಿದ್ದ ಅಮ್ಮನನ್ನು 26 ವರ್ಷಗಳ ನಂತರ ಭೇಟಿಯಾದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 6:21 IST
Last Updated 20 ಮಾರ್ಚ್ 2020, 6:21 IST
ಜತೆಯಾದ ಅಮ್ಮ ಮಕ್ಕಳು
ಜತೆಯಾದ ಅಮ್ಮ ಮಕ್ಕಳು   

ಚೆನ್ನೈ: ಕೌಟುಂಬಿಕಜಗಳದಲ್ಲಿ ಮಕ್ಕಳು ಮತ್ತು ಗಂಡನಿಗೆ ವಿಷ ನೀಡಿ ಮನೆ ಬಿಟ್ಟು ಹೋಗಿದ್ದ ಅಮ್ಮನನ್ನು 26 ವರ್ಷಗಳ ನಂತರ ಭೇಟಿಯಾದಾಗ ಮಕ್ಕಳ ಕಣ್ಣಲ್ಲಿ ಆನಂದಭಾಷ್ಪ.ಅಮ್ಮನಿಗೆ ಮಕ್ಕಳ ಗುರುತು ಸಿಗಲಿಲ್ಲ. ಆದರೆ ಮಕ್ಕಳು ಕುಟುಂಬದ ಫೋಟೊ ತೋರಿಸಿ ಅಮ್ಮನಿಗೆ ಹಳೆಯದನ್ನೆಲ್ಲ ನೆನಪಿಸಿ, ಮನೆಗೆ ಕರೆದುಕೊಂಡು ಬಂದಿದ್ದಾರೆ.ಆ ರೀತಿ ಅಮ್ಮ ಮಕ್ಕಳ ಸಮಾಗಮ ನಡೆದದ್ದು ಚೆನ್ನೈನಲ್ಲಿ.

ನೀಲಮ್ಮ ಎಂಬ ಮಹಿಳೆಗೆ ಈಗ 60 ವರ್ಷ ವಯಸ್ಸು, ಮಾನಸಿಕ ಖಾಯಿಲೆಯೂ ಇದೆ. 26 ವರ್ಷಗಳ ಹಿಂದೆ ಹೈದರಾಬಾದ್‌ನ ಹೊರವಲಯದಲ್ಲಿರುವ ಶಾದ್‌ನಗರ್‌ನಲ್ಲಿ ಪತಿ ಅಂಜಯ್ಯ ಮತ್ತು ಮಕ್ಕಳಾದ ಸಂತೋಷ್ ಕುಮಾರ್, ರಾಜೇಶ್ ಖನ್ನಾ, ಮಯೂರಿ ಮತ್ತು ಕವಿತಾ ಜತೆ ವಾಸಿಸುತ್ತಿದ್ದರು. 1994ರಲ್ಲಿ ಕುಟುಂಬದಲ್ಲುಂಟಾದ ಜಗಳದಲ್ಲಿ ಪತಿ ಮತ್ತು ಮಕ್ಕಳಿಗೆ ಇಲಿ ವಿಷ ನೀಡಿ ಹತ್ಯೆ ಮಾಡಲು ಪ್ರಯತ್ನಿಸಿದ್ದರು ನೀಲಮ್ಮ.ಈ ರೀತಿ ವಿಷ ನೀಡಿದ ತಕ್ಷಣವೇ ನೀಲಮ್ಮ ಮನೆ ಬಿಟ್ಟು ಹೋಗಿದ್ದರು. ಇತ್ತ ಗಂಡ ಮತ್ತು ಮಕ್ಕಳು ಸಾವಿನಿಂದ ಪಾರಾಗಿದ್ದರು. ಅಂಜಯ್ಯ ಅವರು 2017ರಲ್ಲಿ ಮೃತರಾಗಿದ್ದರು.

ಹೀಗೆ ಮನೆ ಬಿಟ್ಟು ಹೋದ ಅಮ್ಮನ ಪತ್ತೆಯೇ ಇರಲಿಲ್ಲ ಕೆಲವು ದಿನಗಳ ಹಿಂದೆ ಚೆನ್ನೈನ ಲಿಟ್ಲ್ ಹಾರ್ಟ್ ಸೊಸೈಟಿ ಎಂಬ ಎನ್‌ಜಿಒದಿಂದ ಕರೆಬಂತು. ನೀಲಮ್ಮ ಕಳೆದ ಒಂದು ವರ್ಷದಿಂದ ಅಲ್ಲಿದ್ದರು. ವಿಷಯ ತಿಳಿದ ಸಂತೋಷ್ ಕುಮಾರ್, ರಾಜೇಶ್ ಖನ್ನಾ ಮತ್ತು ಕವಿತಾ ಅಮ್ಮನನ್ನು ಭೇಟಿ ಮಾಡಲು ಚೆನ್ನೈಗೆ ಪ್ರಯಾಣ ಬೆಳಸಿದ್ದರು.

ADVERTISEMENT

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ನೀಲಮ್ಮ 2019ರಿಂದ ಚೆನ್ನೈನ ಹೊರವಲಯ ಇಂಜಂಬಕ್ಕಂನಲ್ಲಿರುವ ಎನ್‌ಜಿಒದಲ್ಲಿದ್ದಾರೆ. ನಿರಂತರ ಚಿಕಿತ್ಸೆಯಿದಾಗಿ ಅವರ ನೆನಪಿನ ಶಕ್ತಿ ಸ್ವಲ್ಪ ಸ್ವಲ್ಪವೇ ಮರಳಿ ಬಂದಿತ್ತು.

ಕುಟುಂಬದವರ ಜತೆ ಮತ್ತೆ ಒಂದಾಗಲಿದ್ದೀರಿ ಎಂದು ಹೇಳಿದಾಗ ಅವರು ತನ್ನ ಗಂಡ ಹೈದರಾಬಾದ್‌ನ ಶಾದ್‌ನಗರದಲ್ಲಿ ಭವಾನಿ ಫೋಟೊ ಫ್ರೇಮ್ ಅಂಗಡಿ ನಡೆಸುತ್ತಿದ್ದರು ಎಂದು ಹೇಳಿದರು. ಅವರಿಗೆ ನೆನಪಿದ್ದದ್ದು ಅಷ್ಟೇ. ಈ ಸುಳಿವಿನ ಬೆನ್ನು ಹತ್ತಿ ರಾಜ್ಯ ಅಪರಾಧ ದಾಖಲೆಗಳ ಬ್ಯೂರೊ (ಎಸ್‌ಸಿಆರ್‌ಬಿ) ನೀಲಮ್ಮನ ಕುಟುಂಬವನ್ನು ಜಾಲಾಡಿತ್ತು ಎಂದು ಪ್ರಸ್ತುತ ಎನ್‌ಜಿಒದ ರೀತಾ ಈಯಪ್ಪನ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ನೀಲಮ್ಮ ಆಗಲೀ ಅವರ ಮಕ್ಕಳಿಗಾಗಲೀ ಮತ್ತೆ ಒಂದಾಗುತ್ತೇವೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಮಕ್ಕಳು ಸತ್ತಿರಬಹುದು ಎಂದು ನೀಲಮ್ಮ ಅಂದು ಕೊಂಡಿದ್ದರೆ, ಅಮ್ಮ ಬದುಕಿರಲಿಕ್ಕಿಲ್ಲ ಎಂದು ಮಕ್ಕಳು ಅಂದುಕೊಂಡಿದ್ದರು.

ನಿಮ್ಮ ಅಮ್ಮ ನಮ್ಮಲ್ಲಿದ್ದಾರೆ ಎಂದು ಎನ್‌ಜಿಒದವವರು ಕರೆ ಮಾಡಿ ಹೇಳಿದಾಗ ನನಗೆ ನಂಬಲಾಗಿಲ್ಲಅಂತಾರೆ ಸಂತೋಷ್ ಕುಮಾರ್.

ಮೊದಲು ಅವರಿಗೆ ಮಕ್ಕಳು ಗುರುತು ಸಿಗಲಿಲ್ಲ. ಹಾಗಾಗಿ ಅವರೊಂದಿಗೆ ಹೋಗಲು ಒಪ್ಪಲಿಲ್ಲ. ಆಮೇಲೆ ಮಕ್ಕಳು ತಮ್ಮ ಕುಟುಂಬ ಜತೆಯಾಗಿ ಖುಷಿಯಾಗಿದ್ದಾಗ ತೆಗೆದ ಹಲವಾರು ಫೋಟೊಗಳನ್ನು ತೋರಿಸಿದರು. ಮಹಿಳೆಗೆ ನಿಧಾನವಾಗಿ ಸ್ವಲ್ಪ ನೆನಪುಗಳು ಬರತೊಡಗಿದಾಗ, ಮಕ್ಕಳ ಜತೆ ಹೋಗಲು ಒಪ್ಪಿದರು. ಅದೊಂದು ಭಾವುಕ ಸಮಾಗಮ ಆಗಿತ್ತು ಎಂದು ಎಸ್‌ಸಿಆರ್‌ಬಿಯ ಅಧಿಕಾರಿ ಎ.ಎಸ್ ತಾಹಿರಾ ಹೇಳಿದ್ದಾರೆ.

ಎಸ್‌ಸಿಆರ್‌ಬಿ ಅಧಿಕಾರಿಯಾಗಿರುವ ತಾಹಿರಾ ಇಲ್ಲಿಯವರೆಗೆ 250 ಕುಟುಂಬಗಳನ್ನು ಒಂದಾಗಿಸಿದ್ದಾರೆ. ಹೈದರಾಬಾದ್‌ನಿಂದ ನೀಲಮ್ಮ ಚೆನ್ನೈಗೆ ಹೇಗೆ ಬಂದರೂ ಎಂಬುದು ತಿಳಿಯುತ್ತಿಲ್ಲ. ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವುದರಿಂದ ಈ ಬಗ್ಗೆ ನಾವು ಹೆಚ್ಚಿನ ತನಿಖೆ ನಡೆಸಿಲ್ಲ. ಆಕೆ ನೀಡಿದ ಮಾಹಿತಿ ಬಳಸಿ ನಾವು ಅವರ ಕುಟುಂಬವನ್ನು ಪತ್ತೆ ಹಚ್ಚಿ ಒಂದಾಗಿಸಿದೆವು ಎಂದು ತಾಹಿರಾ ಹೇಳಿದ್ದಾರೆ.

ಅವರು ಸೋಮವಾರ ಚೆನ್ನೈಗೆ ಬಂದು ಮಂಗಳವಾರ ರಾತ್ರಿ ನೀಲಮ್ಮನ ಜತೆ ಮರಳಿದರು ಎಂದು ರೀತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.