ADVERTISEMENT

Jharkhand Election Results | ಜಾರ್ಖಂಡ್‌ ಗೆಲುವು ‘ಮಹಾ’ ಸೋಲಿಗೆ ಆಗದು ಮುಲಾಮು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:30 IST
Last Updated 23 ನವೆಂಬರ್ 2024, 23:30 IST
   

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗಳ ಚುನಾವಣಾ ಫಲಿತಾಂಶಗಳು ‘ಇಂಡಿಯಾ’ ಮೈತ್ರಿಕೂಟ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಉತ್ಸಾಹ ನೀಡುವುದಕ್ಕಿಂತ ಆಘಾತವನ್ನೇ ನೀಡಿವೆ.

ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಇದು ‘ಇಂಡಿಯಾ’ ಮೈತ್ರಿಕೂಟದ್ದು ಎಂದು ಹೇಳಬಹುದಾದರೂ, ಗೆಲುವಿನ ಶ್ರೇಯ ಜೆಎಂಎಂಗೆ ಸಲ್ಲುತ್ತದೆ. 

ಹಾಗಾಗಿ, ಜಾರ್ಖಂಡ್‌ನಲ್ಲಿನ ಗೆಲುವು ‘ಇಂಡಿಯಾ’ ಮೈತ್ರಿಕೂಟ ಹಾಗೂ ಕಾಂಗ್ರೆಸ್‌ಗೆ ಖುಷಿ ನೀಡಬಹುದು. ಆದರೆ, ಈ ಗೆಲುವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟಕ್ಕೆ ಆಗಿರುವ ಹೀನಾಯ ಸೋಲೆಂಬ ಗಾಯಕ್ಕೆ ಮುಲಾಮು ಆಗುವುದಿಲ್ಲ.

ADVERTISEMENT

ಕರ್ನಾಟಕ, ಕೇರಳದಲ್ಲಿನ ಉಪಚುನಾವಣೆಗಳ ಗೆಲುವು ಕೂಡ ಪಕ್ಷದ ಖುಷಿ ಹೆಚ್ಚಿಸಲಾರದು.

ಲೋಕಸಭಾ ಚುನಾವಣೆಯಲ್ಲಿನ ಗೆಲುವಿನ ನಂತರ ತಾನು ಸೃಷ್ಟಿಸಿದ್ದ ಸಂಕಥನವು ದೇಶದ ರಾಜಕಾರಣದಲ್ಲಿ ಮತ್ತೆ ಪ್ರಾಮುಖ್ಯ ಪಡೆಯಲು ಕಾಂಗ್ರೆಸ್‌ಗೆ ನೆರವಾಗಿತ್ತು. ಇಂತಹ ಸಂಕಥನದಿಂದ ಇವು ದೂರ ಸರಿದಿವೆ ಎಂಬುದಾಗಿ ಈ ಫಲಿತಾಂಶ ಹೇಳಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೇಶದ ವಿವಿಧ ರಾಜ್ಯಗಳಲ್ಲಿನ ಉಪಚುನಾವಣೆಗಳ ಫಲಿತಾಂಶಗಳು ಕೂಡ ‘ಇಂಡಿಯಾ’ಕ್ಕೆ ಆಶಾದಾಯಕವಾಗಿಲ್ಲ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್‌ ಉತ್ಸಾಹದಿಂದ ಬೀಗುತ್ತಿತ್ತು. ಮತ್ತೊಂದೆಡೆ, ಬಿಜೆಪಿಯು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆಯಲ್ಲಿನ ಆಘಾತದಿಂದ ಚೇತರಿಸಿಕೊಂಡಿತು. ಮೈಕೊಡವಿ ನಿಂತು, ಈಗ ಮಹಾರಾಷ್ಟ್ರದಲ್ಲಿ ದಾಖಲೆಯ ಗೆಲುವು ತನ್ನದಾಗಿಸಿಕೊಂಡಿದೆ.

‘ಆತ್ಮಾವಲೋಕನ ಅಗತ್ಯ’: 2019ರ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಪಕ್ಷಕ್ಕೆ ಈಗಿನ ಚುನಾವಣೆಯಲ್ಲಿ ಹಿನ್ನಡೆಯಾಗಲು ಏನು ಕಾರಣ ಎಂಬ ಬಗ್ಗೆ ಕಾಂಗ್ರೆಸ್‌ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಸಂಸತ್‌ನ ಚಳಿಗಾಲದ ಅಧಿವೇಶನದ ಮೇಲೆ ಕೂಡ ಈ ಫಲಿತಾಂಶ ತಕ್ಷಣದ ಪರಿಣಾಮ ಬೀರುವುದು ಖಚಿತ. ಮಣಿಪುರ ವಿದ್ಯಮಾನ, ಗೌತಮ್‌ ಅದಾನಿ ವಿರುದ್ಧ ಅಮೆರಿಕದಲ್ಲಿ ಮಾಡಲಾಗಿರುವ ಲಂಚದ ಆರೋಪಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಬೆವರಿಳಿಸಲು ವಿಪಕ್ಷಗಳು ಸಜ್ಜಾಗಿದ್ದವು. ಈಗ, ಈ ಲೆಕ್ಕಾಚಾರ ಉಲ್ಟಾ ಆದರೂ ಅಚ್ಚರಿಪಡಬೇಕಿಲ್ಲ.

ಇನ್ನೊಂದೆಡೆ, ಮುಂದಿನ ಫೆಬ್ರುವರಿಯಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬಲಿದೆ.

ಹೆಚ್ಚಲಿದೆ ಚಿಂತೆ: ಚುನಾವಣೆಯಲ್ಲಿನ ಹಿನ್ನಡೆಯು ಶರದ್‌ ಪವಾರ್ ಹಾಗೂ ಉದ್ಧವ್‌ ಠಾಕ್ರೆ ಅವರ ಪಾಲಿಗೆ ಅಸ್ತಿತ್ವದ ಪ್ರಶ್ನೆಯಾಗಲಿದ್ದು, ಇದು ‘ಇಂಡಿಯಾ’ ಚಿಂತೆ ಹೆಚ್ಚಿಸಲಿದೆ. ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ನ ಸಾಧನೆ ಕಳಪೆಯಾಗಿತ್ತು.

ಹೀಗಾಗಿ, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ ಸಮರ್ಥವಾಗಿಲ್ಲ ಎಂಬ ವಾದ ಮುಂದಿಡುವುದಕ್ಕೆ ಮಿತ್ರಪಕ್ಷಗಳಿಗೆ ಈ ಫಲಿತಾಂಶ ಮತ್ತೊಮ್ಮೆ ಅಸ್ತ್ರ ಒದಗಿಸಿದಂತಾಗಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ವಿರುದ್ಧ ಈಗಾಗಲೇ ಅಸಮಾಧಾನ ಭುಗಿಲೆದ್ದಿದೆ. 2019ರಲ್ಲಿ ಈ ಹುದ್ದೆಗೇರಿದ ನಂತರ, ಅವರ ನಾಯಕತ್ವದಲ್ಲಿ ನಡೆದ 40 ಚುನಾವಣೆಗಳಲ್ಲಿ ಪೈಕಿ 31 ರಲ್ಲಿ ಪಕ್ಷ ಸೋಲನುಭವಿಸಿರುವುದು ಅಸಮಾಧಾನಕ್ಕೆ ಕಾರಣ.

ನಡೆಯದ ಮೋದಿ ಮೋಡಿ

ಜಾರ್ಖಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾಂತ್ರಿಕತೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಲ ತುಂಬಿ ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾಗಿಲ್ಲ. ‘ಬಟೇಂಗೆ ತೊ ಕಾಟೇಂಗೆ’ (ಒಗ್ಗಟ್ಟಾಗಿರದಿದ್ದರೆ ನಾಶವಾಗಿ ಹೋಗುತ್ತೇವೆ) ಎಂಬ ಘೋಷಣೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿ ಎಲ್ಲ ಹಿರಿಯ ನಾಯಕರಿಂದ ಕೇಳಿಬಂತು. ಬುಡಕಟ್ಟು ಜನರು ಹಾಗೂ ಮುಸ್ಲಿಮರಲ್ಲಿ ಒಡಕು ಉಂಟುಮಾಡಲು ನಡೆಸಿದ ಈ ತಂತ್ರ ಕೂಡ ಫಲಿಸಲಿಲ್ಲ’ ಎಂದು ವಿಶ್ಲೇಷಿಸಲಾಗುತ್ತಿದೆ.

‘ಹಣ ಅಕ್ರಮ ವರ್ಗಾವಣೆ ಆರೋಪದಡಿ ಹೇಮಂತ್‌ ಅವರನ್ನು ಬಂಧಿಸುವ ಮೂಲಕ ತಾನು ಎಂತಹ ರಾಜಕೀಯ ಪ್ರಮಾದ ಮಾಡಿದೆ ಎಂಬುದನ್ನು ಬಿಜೆಪಿಯ ವರಿಷ್ಠರು ಅರಿಯಲಿಲ್ಲ’ ಎಂದು ರಾಂಚಿ ಮೂಲದ ರಾಜಕೀಯ ವಿಶ್ಲೇಷಕ ಧರ್ಮವೀರ ಸಿನ್ಹಾ ಹೇಳುತ್ತಾರೆ. ಸೀಟು ಹಂಚಿಕೆಯನ್ನು ಹೇಮಂತ್‌ ಸೊರೇನ್‌ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಬಿಜೆಪಿಯ ರಾಜ್ಯ ನಾಯಕರಲ್ಲಿ ಒಗ್ಗಟ್ಟೇ ಇರಲಿಲ್ಲ. ಬಣ ರಾಜಕೀಯ ಬಿಜೆಪಿಗೆ ಮುಳುವಾಯಿತು ಎಂದೂ ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಶೇ 26ರಷ್ಟು ಬುಡಕಟ್ಟು ಜನರು ಶೇ 20ರಷ್ಟು ಮುಸ್ಲಿಮರಿದ್ದಾರೆ. ಇವರು ‘ಇಂಡಿಯಾ’ ಮೈತ್ರಿಕೂಟದ ಜೊತೆ ಗಟ್ಟಿಯಾಗಿ ನಿಂತಿದ್ದರ ಪರಿಣಾಮ ಜೆಎಂಎಂ ಕೋಟೆಯನ್ನು ಭೇದಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.