ADVERTISEMENT

ಆನ್‌ಲೈನ್‌ ವೇದಿಕೆ ಮೇಲೆ ತೂಗುಕತ್ತಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 4:31 IST
Last Updated 8 ಏಪ್ರಿಲ್ 2023, 4:31 IST
ರಾಜೀವ್‌ ಚಂದ್ರಶೇಖರ್‌
ರಾಜೀವ್‌ ಚಂದ್ರಶೇಖರ್‌   

ನವದೆಹಲಿ (ಪಿಟಿಐ): ಸುಳ್ಳು ಅಥವಾ ದಿಕ್ಕು ತಪ್ಪಿಸುವಂತಹ ವಿವರಗಳಿಂದ ಕೂಡಿದೆ ಎಂದು ಸರ್ಕಾರ ನಿಯೋಜನೆ ಮಾಡುವ ಫ್ಯಾಕ್ಟ್‌ ಚೆಕ್‌ ಘಟಕವು ಗುರುತಿಸುವ ಮಾಹಿತಿಯನ್ನು ಗೂಗಲ್‌, ಫೇಸ್‌ಬುಕ್‌, ಟ್ವಿಟರ್‌ ನಂತಹ ಆನ್‌ಲೈನ್‌ ವೇದಿಕೆಗಳು ಅಳಿಸಿಹಾಕದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 79ರ ಅಡಿ ದತ್ತವಾದ ರಕ್ಷಣೆಯ ಹಕ್ಕನ್ನೂ ಅವುಗಳು ಕಳೆದುಕೊಳ್ಳಲಿವೆ. ಸರ್ಕಾರದ ಈ ನೀತಿಗೆ ಮಾಧ್ಯಮ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಯಾವುದೇ ಆನ್‌ಲೈನ್‌ ವೇದಿಕೆಗೆ ಕಾನೂನು ಪ್ರಕ್ರಿಯೆ ಎದುರಿಸಬಹುದಾದಂತಹ ಮಾಹಿತಿಯು ಮೂರನೇ ವ್ಯಕ್ತಿಯಿಂದ ಪೋಸ್ಟ್‌ ಆಗಿದ್ದರೆ ಆ ಆನ್‌ಲೈನ್‌ ವೇದಿಕೆಯು ಅದಕ್ಕೆ ಬಾಧ್ಯಸ್ಥವಾಗದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಸೆಕ್ಷನ್‌ 79 ರಕ್ಷಣೆ ನೀಡುತ್ತದೆ.

ಸರ್ಕಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ (ಪಿಐಬಿ) ಫ್ಯಾಕ್ಟ್‌ ಚೆಕ್‌ ಮಾಡಿ ವಿವರ ಒದಗಿಸಲಿದೆ. ಈ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಷ್ಟರಲ್ಲಿಯೇ ಅಧಿಸೂಚನೆ ಹೊರಡಿಸಲಿದೆ. ಫ್ಯಾಕ್ಟ್‌ ಚೆಕ್‌ ಕುರಿತು ಮಧ್ಯವರ್ತಿಗಳಾದ ಆನ್‌ಲೈನ್‌ ವೇದಿಕೆಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿವರವನ್ನೂ ಸಚಿವಾಲಯ ಒದಗಿಸಲಿದೆ.

ADVERTISEMENT

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಹೊಸ ಐ.ಟಿ ನಿಯಮದ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ‘ಇದೊಂದು ಪ್ರಜಾಪ್ರಭುತ್ವ ವಿರೋಧಿಯಾದ ಕಠೋರ ನಿರ್ಧಾರ’ ಎಂಬ ಟೀಕೆ ವ್ಯಕ್ತವಾಗಿದೆ.

‘ಸುಳ್ಳು ಸುದ್ದಿಯ ವಿರುದ್ಧ ಸಾರಿರುವ ಈ ಸಮರವು ವಾಕ್‌ ಸ್ವಾತಂತ್ರ್ಯ ವನ್ನು ಮೊಟಕುಗೊಳಿಸುತ್ತದೆ ಎಂಬ ವಾದವನ್ನು ಒಪ್ಪಲಾಗದು’ ಎಂದು ರಾಜೀವ್‌ ತಿರುಗೇಟು ನೀಡಿದ್ದಾರೆ.

‘ಸೆಕ್ಷನ್‌ 79ರಡಿ ನೀವು ರಕ್ಷಣೆ ಬಯಸುವುದಾದರೆ ನೀವು ಅದಕ್ಕೆ ತಕ್ಕ ಹೊಣೆಯನ್ನು ನಿಭಾಯಿಸಲೇ ಬೇಕು. ಆ ಹೊಣೆ ಏನೆಂದರೆ ಸುಳ್ಳು ಮಾಹಿತಿ ಹರಡುವುದನ್ನು ತಡೆಯುವುದೇ ಆಗಿದೆ’ ಎಂದು ಅವರು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ನಿಯಮಕ್ಕೆ ಮಾಡಿರುವ ಬದಲಾವಣೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಭಾರತೀಯ ಸಂಪಾದಕರ ಕೂಟವು ಆಗ್ರಹಿಸಿದೆ. ಈ ನಿಯಮ ಸೆನ್ಸರ್‌ಷಿಪ್‌ಗೆ ದಾರಿ ಮಾಡಿಕೊಡಲಿದೆ. ಅಲ್ಲದೆ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಸಿಪಿಎಂ ಸಹ ನಿಯಮ ಬದ ಲಾವಣೆಯನ್ನು ಬಲವಾಗಿ ವಿರೋಧಿಸಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಟೀಕಿಸಿದೆ.

**ಆನ್‌ಲೈನ್‌ ವೇದಿಕೆ ಮೇಲೆ ತೂಗುಕತ್ತಿಫ್ಯಾಕ್ಟ್‌ ಚೆಕ್‌ ಘಟಕ ನೀಡುವ ಮಾಹಿತಿ ನಿರಾಕರಿಸಿ ಸುದ್ದಿ ಯನ್ನು ಹಾಗೇ ನೀವು ಮುಂದುವರಿಸ ಬಲ್ಲಿರಿ. ಆದರೆ, ಬಾಧಿತನು ಕೋರ್ಟ್‌ಗೆ ಹೋದರೆ ನಿಮಗೆ ಸೆ.79ರ ರಕ್ಷಣೆ ಇಲ್ಲ.

-ರಾಜೀವ್‌ ಚಂದ್ರಶೇಖರ್‌, ಕೇಂದ್ರ ಐ.ಟಿ ಖಾತೆ ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.