ADVERTISEMENT

ಉದ್ಧವ್‌ ಸರ್ಕಾರಕ್ಕೆ ಕುತ್ತು: ಎಚ್ಚರಿಕೆ ಕಡೆಗಣಿಸಿದ್ದೇ ಬಿಕ್ಕಟ್ಟಿಗೆ ಕಾರಣವೇ?

ಮೃತ್ಯುಂಜಯ ಬೋಸ್
Published 22 ಜೂನ್ 2022, 5:52 IST
Last Updated 22 ಜೂನ್ 2022, 5:52 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಮಹಾರಾಷ್ಟ್ರದ ‘ಮಹಾ ವಿಕಾಸ ಅಘಾಡಿ’ ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದ್ದು, ಶಿವಸೇನಾ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹಲವು ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟ. ತಮ್ಮ ಪಕ್ಷ ಹಾಗೂ ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಕಾಂಗ್ರೆಸ್ ಹಾಗೂ ಎನ್‌ಸಿಪಿ ಒಳಗೊಂಡ ಮೈತ್ರಿಕೂಟ ಸರ್ಕಾರವನ್ನು ಉಳಿಸಿಕೊಳ್ಳುವ ಒತ್ತಡಕ್ಕೆ ಉದ್ಧವ್ ಸಿಲುಕಿದ್ದಾರೆ.

2019ರ ವಿಧಾನಸಭಾ ಚುನಾವಣೆಯ ಬಳಿಕ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಸಾಮರ್ಥ್ಯ ಬಿಜೆಪಿಗೆ ಇರಲಿಲ್ಲ. ಹೀಗಾಗಿ ಎಸ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆ ಶಿವಸೇನಾ ಮಾತುಕತೆಗೆ ಮುಂದಾಯಿತು. ಶಿಂಧೆ ಸೇರಿದಂತೆ ಹಲವರು ಈ ನಡೆಯನ್ನು ವಿರೋಧಿಸಿದ್ದರು. ಆದರೆ, ಹೊಸ ಯತ್ನಕ್ಕೆ ಸಂಜಯ ರಾವುತ್, ಅನಿಲ್ ಪರಬ್ ಹಾಗೂ ಮಿಲಿಂದ್ ನರ್ವೇಕರ್ ಬೆಂಬಲ ಸೂಚಿಸಿದ್ದರು.

ಬಿಜೆಪಿ ಸಖ್ಯ ತೊರೆದ ಶಿವಸೇನಾ, ‘ಮಹಾ ವಿಕಾಸ ಅಘಾಡಿ’ಯನ್ನು ಕಟ್ಟಿತು. ಬಹಳಷ್ಟು ಶಾಸಕರಿಗೆ ಈ ಮೈತ್ರಿಕೂಟ ಇಷ್ಟವಿರಲಿಲ್ಲ. ಹಿಂದುತ್ವದ ನೆಲೆಯ ಶಿವಸೇನಾವನ್ನು ಇಷ್ಟು ಕಾಲ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್, ಎನ್‌ಸಿಪಿ ಕಾರ್ಯಕರ್ತರು ಮೈತ್ರಿಯಿಂದ ಇರಿಸುಮುರಿಸು ಅನು ಭವಿಸಿದರು.ಕೋವಿಡ್ ಇದ್ದ ಎರಡು ವರ್ಷಗಳ ಕಾಲ ಉದ್ಧವ್ ಅವರು ಮನೆಯಿಂದಲೇ ಕೆಲಸ ಮಾಡಿದರು. ಈ ಅವಧಿಯಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಗುದ್ದಾಟ ನಡೆಯುತ್ತಲೇ ಇತ್ತು.ಉದ್ಧವ್ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪವೂ ಇದೆ.

ಶಿವಸೇನಾ ನಾಯಕರಾದ ರಾವುತ್, ಭಾವನಾ ಗೌಳಿ, ಆನಂದ್ ಅಡಸುಲ್, ಅನಿಲ್ ಪರಬ್, ಪ್ರತಾಪ್ ಸರ್ನಾಯಕ್‌ ಮೊದಲಾದವರು ಇ.ಡಿ ವಿಚಾರಣೆ ಎದುರಿಸಿದರು.ಸಚಿವರಾದ ಅನಿಲ್ ದೇಶ್‌ಮುಖ್, ನವಾಬ್ ಮಲಿಕ್ ಅವರು ಬಂಧನಕ್ಕೆ ಒಳಗಾದರು.ಇನ್ನಷ್ಟು ತಡ ಮಾಡದೇ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿ ಕೊಳ್ಳುವಂತೆ ಸರ್ನಾಯಕ್ ಅವರು ಉದ್ಧವ್ ಅವರಿಗೆ ಸಲಹೆ ನೀಡಿದ್ದರು.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನ ಗೆದ್ದರೆ, ಸೇನಾ ಹಾಗೂ ಕಾಂಗ್ರೆಸ್‌ನ ಒಬ್ಬೊಬ್ಬ ಅಭ್ಯರ್ಥಿ ಸೋಲಿನ ನಿರಾಸೆ ಅನುಭವಿಸಿದರು.ಈ ಘಟನೆಗಳು ಚಿಕ್ಕದಾಗಿ ಕಾಣಿಸಿದರೂ, ಇವೆಲ್ಲವೂ ದೊಡ್ಡ ಬಿಕ್ಕಟ್ಟು ಸೃಷ್ಟಿಸಿರು
ವುದು ನಿಜ ಎನ್ನುತ್ತಾರೆ ಮೈತ್ರಿಕೂಟದ ಹಿರಿಯ ನಾಯಕರೊಬ್ಬರು.

ಏಕನಾಥ ಶಿಂಧೆ ಯಾರು?

ಠಾಣೆಯಲ್ಲಿ ಆರಂಭದ ದಿನಗಳಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಏಕನಾಥ ಶಿಂಧೆ, ಶಿವಸೇನಾ ಸೇರಿ, ತಮ್ಮ ಸಂಘಟನಾ ಕೌಶಲದಿಂದ ಪಕ್ಷದಲ್ಲಿ ಹಂತಹಂತವಾಗಿ ಮೇಲೇರಿದರು.ಸಾತಾರಾ ಜಿಲ್ಲೆಯ ಮರಾಠ ಮನೆತನಕ್ಕೆ ಸೇರಿದ ಶಿಂಧೆ ಅವರು ಈಗಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ.

ಪಕ್ಷ ನಿಷ್ಠ ಹಾಗೂ ಸಂಘಟನಾ ಚತುರ ಎಂಬ ವಿಶೇಷಣಗಳಿಗೆ ಏಕನಾಥ ಶಿಂಧೆ ಸರಿ ಹೊಂದುತ್ತಾರೆ. ಸಮಸ್ಯೆಗಳು ಎದುರಾದಾಗ ಅಥವಾ ಪ್ರಮುಖ ಕೆಲಸಗಳಿದ್ದಾಗ ಉದ್ಧವ್ ಠಾಕ್ರೆ ಅವರು ಮಾಡುವ ಕೆಲವು ಕರೆಗಳಲ್ಲಿ ಒಂದು ಕರೆಯಂತೂ ಶಿಂಧೆ ಅವರಿಗೆ ಹೋಗಿರುತ್ತದೆ.

ಬಾಳಾ ಠಾಕ್ರೆ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಕಟ್ಟಿದ ಶಿವಸೇನಾವನ್ನು ಇಷ್ಟುಪಟ್ಟು ಸೇರಿದ್ದ ಶಿಂಧೆ, ಮತ್ತೊಬ್ಬ ಮುಖಂಡ ಠಾಣೆಯ ಆನಂದ್ ದಿಘೆ ಅವರ ನೆರಳಿನಲ್ಲಿ ಬೆಳೆದರು. 2001ರಲ್ಲಿ ದಿಘೆ ಸಾವಿನ ಬಳಿಕ ಆ ಭಾಗದಲ್ಲಿ ಪಕ್ಷದ ಸಂಘಟನೆ ಜವಾಬ್ದಾರಿ ವಹಿಸಿಕೊಂಡರು. 1997ರಲ್ಲಿ ಪುರಸಭೆಯ ಚುನಾವಣೆಯಲ್ಲಿ ಗೆದ್ದ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈಗ ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಕೆಲ ಸಮಯ ಕೆಲಸ ಮಾಡಿದ್ದಾರೆ.ಇವರ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಲೋಕಸಭಾ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.