ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಕಳೆದ 7 ದಿನಗಳಿಂದ ರಕ್ಷಣಾ ಪಡೆಗಳು ಹಾಗೂ ಉಗ್ರರ ನಡುವೆ ನಡೆಯುತ್ತಿದ್ದ ಗುಂಡಿನ ಚಕಮಕಿ ಅಂತ್ಯಗೊಂಡಿದೆ. ಈ ಕಾಳಗದಲ್ಲಿ ಲಷ್ಕರ್–ಎ–ತಯಬಾದ ಕಮಾಂಡರ್ ಉಜೈರ್ ಖಾನ್ ಹಾಗೂ ಇನ್ನೊಬ್ಬ ಉಗ್ರರನನ್ನು ಕೊಲ್ಲಲಾಗಿದೆ ಎಂದು ಕಾಶ್ಮೀರ ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಮಂಗಳವಾರ ತಿಳಿಸಿದ್ದಾರೆ.
ಇಬ್ಬರು ಯೋಧರು ಸೇರಿ ಭದ್ರತಾ ಪಡೆಯ 4 ಸಿಬ್ಬಂದಿಗಳು ಈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಈವರೆಗೆ ಲಷ್ಕರ್–ಎ–ತಯಬಾದ ಕಮಾಂಡರ್ ಉಜೈರ್ ಖಾನ್‌ನ ಮೃತದೇಹವನ್ನು ಹೊರತೆಗೆಯಲಾಗಿದೆ. ಇನ್ನೊಬ್ಬ ಉಗ್ರನ ಮೃತದೇಹ ಇದ್ದು, ಅದನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ವಿಜಯ್ ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಬುಧವಾರದಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಗದೋಲ್ ಅರಣ್ಯ ಪ್ರದೇಶದಲ್ಲಿ ಕಾಳಗ ಆರಂಭವಾಗಿತ್ತು. ಈಗ ಕಾಳಗ ಅವಸಾನಗೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಯಬೇಕಿದೆ. ಹಲವು ಜೀವಂತ ಷೆಲ್‌ಗಳು ಇರುವ ಶಂಕೆ ಇದ್ದು, ಅವುಗಳನ್ನು ಪತ್ತೆ ಮಾಡಿ ನಿಷ್ಕ್ರೀಯಗೊಳಿಸಬೇಕಿದೆ. ಆ ಪ್ರದೇಶಕ್ಕ ತೆರಳದಂತೆ ನಾವು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನೂ ಎರಡ್ಮೂರು ಉಗ್ರರು ಇದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಎಲ್ಲಾದರೊಂದು ಕಡೆ ಮೂರನೇ ಮೃತದೇಹವೂ ಪತ್ತೆಯಾಗುವ ಸಾಧ್ಯತೆ ಇದೆ. ಶೋಧ ಕಾರ್ಯಾಚರಣೆ ಮುಗಿದ ಬಳಿಕ ಗೊತ್ತಾಗಲಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.