ಅನಂತಪುರ್: ಆಂಧ್ರ ಪ್ರದೇಶದ ಅನಂತಪುರ್ ಜಿಲ್ಲೆಯ ಕೊರ್ತಿಕೊಟಾ ಗ್ರಾಮದಲ್ಲಿರುವ ಶಿವ ದೇಗುಲದಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ.ಇಬ್ಬರು ಮಹಿಳೆ ಮತ್ತು ಓರ್ವ ಪುರುಷನ ಮೃತದೇಹ ಇದಾಗಿದ್ದು, ಇದು ನರಬಲಿ ಪ್ರಕರಣಅಲ್ಲ ಎಂದು ಪೊಲೀಸರು ಹೇಳಿದ್ದಾರೆ.
ದೇವಸ್ಥಾನದೊಳಗೆ ರಕ್ತ ಚೆಲ್ಲಿದ್ದರಿಂದ ಮಾಟ ಮಂತ್ರದಲ್ಲಿ ತೊಡಗಿದ್ದ ಈ ಮೂವರು ಭಾನುವಾರ ರಾತ್ರಿ ಹತ್ಯೆಗೀಡಾಗಿದ್ದಾರೆ ಎಂದು ಅನಧಿಕೃತ ಮೂಲಗಳು ಸುದ್ದಿ ಮಾಡಿದ್ದವು. ನಿಧಿ ಶೋಧದ ವೇಳೆ ಇವರ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕೆ ವ್ಯಕ್ತ ಪಡಿಸಿದ್ದರು.ಆದರೆ ಈ ವದಂತಿಗಳನ್ನು ಪೊಲೀಸರ ನಿರಾಕರಿಸಿದ್ದಾರೆ.
ಸಾವಿಗೀಡಾದವರು ಸತ್ಯಲಕ್ಷ್ಮಿ, ಕಮಲಮ್ಮ ಮತ್ತು ಸಿವರಾಮಿ ರೆಡ್ಡಿ ಎಂದು ಗುರುತು ಪತ್ತೆ ಹಚ್ಚಲಾಗಿದೆ.ಇವರೆಲ್ಲರೂ 50- 55 ವಯಸ್ಸಿನವರಾಗಿದ್ದಾರೆ. ಕಮಲಮ್ಮ ಅವರು ಸಿವರಾಮಿ ರೆಡ್ಡಿ ಅವರ ಸಹೋದರಿ ಆಗಿದ್ದು ಸತ್ಯಲಕ್ಷ್ಮಿ ಅವರು ಅದೇ ಗ್ರಾಮದವರಾಗಿದ್ದಾರೆ.
ಕತ್ತು ಸೀಳಿದಸ್ಥಿತಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿದ್ದು, ಹಂತಕರು ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ.ತನಿಖೆಯ ದಾರಿ ತಪ್ಪಿಸುವುದಕ್ಕಾಗಿ ದೇವಾಲಯದೊಳಗೆ ರಕ್ತ ಚೆಲ್ಲಲಾಗಿದೆ ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಪೊಲೀಸ್ ಅಧಿಕಾರಿ ಮನ್ಸುರುದ್ದೀನ್ ಹೇಳಿದ್ದಾರೆ.
ದೇವಾಲಯ ಆರಡಿಯಷ್ಟೂ ಎತ್ತರವಾಗಲೀ ಅಗಲವಾಗಲೀ ಇಲ್ಲ. ಅದು ತುಂಬಾ ಚಿಕ್ಕ ದೇವಾಲಯ. ಇಲ್ಲಿ ನರಬಲಿ ಕೊಟ್ಟ ಐತಿಹ್ಯವೂ ಇಲ್ಲ. ಅಲ್ಲಿ ಪೂಜೆ ಅಥವಾ ಇನ್ನಿತರ ಕಾರ್ಯಕ್ರಮ ನಡೆದ ಕುರುಹು ಕೂಡಾ ಇಲ್ಲ.ಅಂದರೆ ಅರಶಿನ, ಭಸ್ಮ, ಹೂವು ಅಥವಾ ರಂಗೋಲಿಯೂ ಇಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನರಬಲಿಗೆ ಎಳೆ ವಯಸ್ಸಿನವರನ್ನು ಬಳಸುತ್ತಾರೆ, ಹಿರಿಯ ವಯಸ್ಸಿನ ವ್ಯಕ್ತಿಗಳನ್ನು ನರಬಲಿಗೆ ಬಳಸುವುದಿಲ್ಲ. ಅಂದಹಾಗೆ, ದರೋಡೆಗೋಸ್ಕರವೂ ಈ ಹತ್ಯೆ ನಡೆದಿಲ್ಲ ಯಾಕೆಂದರೆ ಮಹಿಳೆಯ ಮೃತದೇಹದಲ್ಲಿ ಇದ್ದದ್ದು 10 ಗ್ರಾಂ ಚಿನ್ನ. ಒಂದು ವೇಳೆ ನಿಧಿ ಶೋಧಕ್ಕೆ ಬಂದವರು ಇವರ ಕೊಲೆ ಮಾಡಿದ್ದರೆ ಅವರು ಮಹಿಳೆಯ ಬಳಿ ಇದ್ದ ಚಿನ್ನವನ್ನೂ ಕೊಂಡೊಯ್ಯುತ್ತಿದ್ದರು ಎಂದು ಪೊಲೀಸ್ ಹೇಳಿದ್ದಾರೆ.
ಈ ಹತ್ಯೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.