ಹೈದರಾಬಾದ್: ಆನ್‌ಲೈನ್ ಗೇಮ್ ಪಬ್‌ಜಿಯಲ್ಲಿ ಸೋತು, ಸ್ನೇಹಿತರಿಂದ ಅಪಹಾಸ್ಯಕ್ಕೀಡಾದ 16 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂನಲ್ಲಿ ಭಾನುವಾರ ಈ ಘಟನೆ ವರದಿಯಾಗಿದೆ.
ಬಾಲಕ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಶಾಂತಿರಾಜ್ ಎಂಬುವವರ ಅವರ ಪುತ್ರನಾಗಿದ್ದು, ಪಬ್‌ಜಿ ಆಡುವ ಚಟಕ್ಕೆ ಬಿದ್ದಿದ್ದ. ಭಾನುವಾರ ತನ್ನ ಸ್ನೇಹಿತರೊಂದಿಗೆ ಪಬ್‌ಜಿ ಆಟವಾಡುತ್ತಿದ್ದ ಆತ, ಅದರಲ್ಲಿ ಸೋತಿದ್ದ. ಆಗ ಸ್ನೇಹಿತರೆಲ್ಲರೂ ಗೇಲಿ ಮಾಡಿದ್ದಾರೆ, ಅಪಮಾನಿತನಾದ ಬಾಲಕ ಮನೆಗೆ ಬಂದು ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ತಾಂತಿಯಾ ಕುಮಾರಿ, ಪಬ್‌ಜಿಯನ್ನು ನಿಷೇಧಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
2019 ರಲ್ಲಿ ಪಬ್‌ಜಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಅದು ಬೇರೆ ಹೆಸರಿನೊಂದಿಗೆ ಮತ್ತೆ ಲಭ್ಯವಾಗಿದೆ.
ಇತ್ತೀಚೆಗೆ ‘ಪಬ್‌ಜಿ’ ಆಡುವುದನ್ನು ತಡೆದಿದ್ದಕ್ಕಾಗಿ ಉತ್ತರ ಪ್ರದೇಶದ ಲಖನೌನ 16 ವರ್ಷದ ಬಾಲಕನೊಬ್ಬ ತನ್ನ ತಾಯಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದ.
ಕಳೆದ ಏಪ್ರಿಲ್‌ನಲ್ಲಿ ಬೆಂಗಳೂರಿನ 12 ವರ್ಷದ ಬಾಲಕನೊಬ್ಬ ಹುಸಿ ಬಾಂಬ್ ಕರೆ ಮಾಡಿ ರೈಲು ಸಂಚಾರವನ್ನೇ ತಡೆದಿದ್ದ. ಪಬ್‌ಜಿ ಸ್ನೇಹಿತನ ಪ್ರಯಾಣ ತಡೆಯುವ ಉದ್ದೇಶಕ್ಕಾಗಿ ಆತ ಯಲಹಂಕ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.