ತಿರುಪತಿ: ತಿರುಪತಿ ತಿರುಮಲ ಬೆಟ್ಟದಲ್ಲಿ ಟಿಟಿಡಿ ಸ್ಥಾಪಿಸಿರುವ ವಕುಲಮಾತಾ ಕೇಂದ್ರೀಕೃತ ಅಡುಗೆಮನೆಯನ್ನು (Vakulaamatha centralised kitchen) ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶನಿವಾರ ಉದ್ಘಾಟಿಸಿದರು.
ಶುಕ್ರವಾರ ರಾತ್ರಿಯೇ ಬೆಟ್ಟಕ್ಕೆ ಬಂದಿದ್ದ ಅವರು ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಡುಗೆಮನೆಯನ್ನು ಉದ್ಘಾಟಿಸಿ ಅಡುಗೆಗೆ ಚಾಲನೆ ನೀಡಿದರು.
₹14 ಕೋಟಿ ವೆಚ್ಚದಲ್ಲಿ ಟಿಟಿಡಿ ನಿರ್ಮಿಸಿರುವ ವಕುಲಮಾತಾ ಕೇಂದ್ರಿಕೃತ ಅಡುಗೆಮನೆಯಿಂದ ಪ್ರತಿದಿನ 1.25 ಲಕ್ಷ ಭಕ್ತಾಧಿಗಳಿಗೆ ಪ್ರಸಾದ ತಯಾರಿಸಿ ನೀಡಲಾಗುತ್ತದೆ.
ಇದೇ ವೇಳೆ ಬ್ರಹ್ಮೋತ್ಸವ ಪ್ರಾರಂಭದ ಹಿನ್ನೆಲೆಯಲ್ಲಿ ನಾಯ್ಡು ಅವರು ರೇಷ್ಮೆ ವಸ್ತ್ರಗಳನ್ನು ದೇವರಿಗೆ ಸಮರ್ಪಿಸಿ ಟಿಟಿಡಿ ಹೊರತಂದಿರುವ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಟಿಟಿಡಿ ಅಧಿಕಾರಿಗಳ ಸಭೆ ನಡೆಸಿದ ನಾಯ್ಡು ಅವರು, ಬೆಟ್ಟದಲ್ಲಿ ನೀರಿನ ಕೊರತೆ ಆಗದ ಹಾಗೇ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಅರಣ್ಯ ಅಧಿಕಾರಿಗಳು ಬೆಟ್ಟದ ಜೀವವೈವಿದ್ಯತೆಯನ್ನು ಕಾಪಾಡಬೇಕು ಎಂದು ಸೂಚನೆ ನೀಡಿದರು.
ಅಲ್ಲದೇ ವೆಂಕಟೇಶ್ವರ ಹಾಗೂ ದೇವಸ್ಥಾನದ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಸ್ವಾಗತ
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬಿನ ಅಂಶ ಹೊಂದಿದ್ದ ತುಪ್ಪ ಬಳಸಲಾಗಿದೆ ಎಂಬ ಆರೋಪದ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ಐವರು ಸದಸ್ಯರ ‘ಸ್ವತಂತ್ರ’ ವಿಶೇಷ ತನಿಖಾ ತಂಡವನ್ನುರಚಿಸಿದ್ದನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವಾಗತಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಸ್ವತಂತ್ರ’ ವಿಶೇಷ ತನಿಖಾ ತಂಡದ ರಚನೆಯನ್ನು ನಾನು ಸ್ವಾಗತಿಸುತ್ತೇನೆ. ಆಂಧ್ರ ಪ್ರದೇಶ ಪೊಲೀಸರು ಹಾಗೂ FSSAI ಅಧಿಕಾರಿಗಳಿರುವ ಎಸ್‌ಐಟಿ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿ ಸತ್ಯವನ್ನು ಬಹಿರಂಗಗೊಳಿಸಲಿದೆ ಎಂದು ನಂಬಿದ್ದೇನೆ. ಜೈ ವೆಂಕಟೇಶ್ವರ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.