ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಂಗಳವಾರ ತಡರಾತ್ರಿ ಭೇಟಿ ಮಾಡಿ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
ದೆಹಲಿಯ ಅಮಿತ್ ಶಾ ಅವರ ನಿವಾಸದಲ್ಲಿ ಶಾ ಅವರನ್ನು ನಾಯ್ಡು ಭೇಟಿ ಮಾಡಿದರು. ಆಂಧ್ರಪ್ರದೇಶ ವಿಭಜನೆ ಆದ ಬಳಿಕ ರಾಜ್ಯ ಎದುರಿಸುತ್ತಿರುವ ಹಣಕಾಸು ಸಮಸ್ಯೆಗಳ ಬಗ್ಗೆ ಶಾ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಆರ್ಥಿಕ ನೆರವು ಕುರಿತು ಚರ್ಚೆ ನಡೆಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
15 ದಿನಗಳಲ್ಲಿ ನಾಯ್ಡು ಅವರ ಎರಡನೇ ದೆಹಲಿ ಪ್ರವಾಸ ಇದಾಗಿದೆ. ಜುಲೈ 4ರಂದು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದ ನಾಯ್ಡು, ಏಳು ಅಂಶಗಳ ಅಭಿವೃದ್ಧಿ ಕಾರ್ಯಸೂಚಿಯನ್ನು ಮಂಡಿಸಿದರು.
ಮುಂಬರುವ ಬಜೆಟ್‌ನಲ್ಲಿ ಬಿಹಾರಕ್ಕೆ ಹೆಚ್ಚಿನ ಅನುದಾನ ಕೋರಿ ಸೀತಾರಾಮನ್ ಅವರನ್ನು ಜೆಡಿ(ಯು) ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಸೋಮವಾರ ಭೇಟಿ ಮಾಡಿದರು. ಇದರ ಬೆನ್ನಲ್ಲೇ ನಾಯ್ಡು ಅವರು ನಿನ್ನೆ (ಮಂಗಳವಾರ) ತಡರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಕಳೆದ ಬಾರಿ ಶಾ ಹಾಗೂ ಸೀತಾರಾಮನ್ ಸೇರಿದಂತೆ ಇತರೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು. ಈ ವೇಳೆ ಆಂಧ್ರಪ್ರದೇಶಕ್ಕೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಒತ್ತಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.