ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಅಮರಾವತಿಗೆ ಭೇಟಿ ನೀಡಿ ರಾಜಧಾನಿ ನಿರ್ಮಾಣದ ಸ್ಥಿಗತಿಗಳನ್ನು ಪರಿಶೀಲಿಸಿದರು.
ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರವಿದ್ದ 2019–2024 ಅವಧಿಯಲ್ಲಿ ಅಮರಾವತಿ ರಾಜಧಾನಿಯ ಯೋಜನೆಯನ್ನು ಆರಂಭಿಸಲಾಗಿತ್ತು. ಆದರೆ ಅದು ನೆನೆಗುದಿಗೆ ಬಿದ್ದಿತ್ತು. ಈಗ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಜನೆ ಮತ್ತೆ ಚುರುಕು ಪಡೆದುಕೊಂಡಿದೆ.
ಅಮರಾವತಿಗೆ ಭೇಟಿ ನೀಡಿದ ನಾಯ್ಡು, ನಿರ್ಮಾಣ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಶಾಸಕರು, ನ್ಯಾಯಾಧೀಶರುಗಳ ವಸತಿ ಕಟ್ಟಡ, ಹೈಕೋರ್ಟ್, ಸಚಿವಾಲಯ ಸೇರಿ ಇತರ ಕಟ್ಟಡ ನಿರ್ಮಾಣ ಸ್ಥಳಗಳನ್ನು ವೀಕ್ಷಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮರಾವತಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ, ಮುಂದೆ ಏನು ಮಾಡಬಹುದು ಎಂದು ಪರಿಶೀಲಿಸಿದ್ದೇನೆ. ಈ ಯೋಜನೆಯ ಶ್ವೇತ ಪತ್ರ ಹೊರಡಿಸಲಿದ್ದೇವೆ’ ಎಂದರು.
ಅಮರಾವತಿಯಲ್ಲಿ ರಾಜಧಾನಿ ನಿರ್ಮಾಣಕ್ಕೆ ಸುಮಾರು 55 ಸಾವಿರ ಎಕರೆ ಜಮೀನು ದೊರೆಯಲಿದೆ ಎಂದ ಅವರು, ಗ್ರೀನ್‌ಫೀಲ್ಡ್ ರಾಜಧಾನಿ ನಿರ್ಮಾಣಕ್ಕೆ ಜಾಗ ನೀಡಿದ ರೈತರಿಗೆ ಧನ್ಯವಾದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.