ಹೈದರಾಬಾದ್:ಕಂದಾಯ ಅಧಿಕಾರಿಗೆಲಂಚ ಕೊಟ್ಟುಸಂಬಂಧಿಕರು ಮೋಸದಿಂದ ಪಡೆದ ಭೂಮಿಯನ್ನು ಲಂಚ ನೀಡಿಯೇ ವಾಪಸ್ ಪಡೆಯುವುದಕ್ಕಾಗಿ,ಆಂಧ್ರಪ್ರದೇಶದ ರೈತ ಕುಟುಂಬವೊಂದುಭಿಕ್ಷೆ ಬೇಡುತ್ತಿದೆ.
ಸರ್ಕಾರಿ ಕಚೇರಿಯಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಲ್ಲದೆ, ಕುಟುಂಬಕ್ಕೆ ಆಧಾರವಾಗಿರುವ ಜಮೀನನ್ನು ವಾಪಸ್ ಪಡೆಯಲು ಆ ಕುಟುಂಬ ಈ ರೀತಿಯ ಭಿನ್ನ ಪ್ರತಿಭಟನೆಗೆ ಮುಂದಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕರ್ನೂಲ್ ಜಿಲ್ಲೆಯ ರೈತ ಮನ್ಯಾಂ ವೆಂಕಟೇಶ್ವರಲು (ರಾಜು), ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ‘ನೀವು ಹಣ ನೀಡಿದರೆ, ಅದರಿಂದ ನಾನು ಅಧಿಕಾರಿ ಲಂಚ ನೀಡುತ್ತೇನೆ. ಆಗಲಾದರೂ ನಮ್ಮ ಜಮೀನು ಮರಳಿ ಸಿಗಬಹುದು‘ ಎಂದು ಅಂಗಲಾಚುತ್ತಾ ಭಿಕ್ಷೆ ಬೇಡುತ್ತಿದ್ದಾರೆ.
‘ದಯವಿಟ್ಟು ದಾನ ಮಾಡಿ. ಇದರಿಂದ ನಾನು ಲಂಚ ನೀಡಬಹುದು. ನೀವು ಹಣ ನೀಡಿದರೆ, ನಿಮ್ಮ ಯಾವ ಕೆಲಸವಾದರೂ ಆಗುತ್ತದೆ. ನನಗೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ಜಮೀನನ್ನು ಕಳೆದುಕೊಂಡೆ. ಎರಡು ವರ್ಷದಿಂದ ಇದಕ್ಕಾಗಿ ಪರಿತಪಿಸುತ್ತಿದ್ದೇನೆ‘ ಎಂದು ರಾಜು ಹೇಳಿದರು.
‘ಕಂದಾಯ ಇಲಾಖೆ ಅಧಿಕಾರಿಗೆ ಲಂಚ ನೀಡಲು ನಮ್ಮ ಬಳಿ ಹಣವಿಲ್ಲ. ನಮ್ಮ ಜಮೀನನ್ನು ಪಡೆಯುವುದಕ್ಕಾಗಿ ಕುಟುಂಬದವರೆಲ್ಲ ಸೇರಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ’ ಎಂಬ ತೆಲುಗು ಬರಹದ ಬ್ಯಾನರ್ ಅನ್ನು ಹಿಡಿದು ಇವರು ಬೀದಿ ಬೀದಿ ಅಲೆಯುತ್ತಿದ್ದಾರೆ. ಅಲ್ಲದೆ, ಹೀಗೆ ಪ್ರತಿಭಟಿಸುತ್ತಿರುವುದರಿಂದ ಆ ಅಧಿಕಾರಿ ತಮಗೆ ಏನಾದರೂ ಮಾಡಬಹುದು ಎನ್ನುವ ಭಯವೂ ಈಗ ರೈತ ಕುಟುಂಬದವರನ್ನು ಆವರಿಸಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಮಾಧವರಾಮ್ ಹಳ್ಳಿಯಲ್ಲಿ, ರಾಜು ಅವರಿಗೆ ಸೇರಿದ 25 ಎಕರೆ ಭೂಮಿ ಇತ್ತು. ಆದರೆ, ಅವರ ಸಂಬಂಧಿಕರು ಈ ಹಿಂದೆ ಆ ಗ್ರಾಮದಲ್ಲಿದ್ದ ಕಂದಾಯ ಅಧಿಕಾರಿಗೆ ಲಂಚ ನೀಡಿ ಅದನ್ನು ಅವರ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ರಾಜು ಅವರುಅಧಿಕಾರಿಗೆ ಕೇಳಿದರೆ, ‘ಜಿಲ್ಲಾಧಿಕಾರಿಯ ಬಳಿ ಎಲ್ಲಾ ದಾಖಲೆಗಳು ಸಿದ್ಧವಾಗಿವೆ. ಯಾವುದೇ ಸಮಯದಲ್ಲಾದರೂ ಅದನ್ನು ನಿಮ್ಮ ಸಂಬಂಧಿಗಳಿಗೆ ಹಸ್ತಾಂತರಿಸಬಹುದು’ಎನ್ನುತ್ತಿದ್ದಾರೆ.
ಇದರಿಂದ ಬೇಸರಗೊಂಡ ವೆಂಕಟೇಶ್ವರಲು, ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಈ ಭಿನ್ನ ಹಾದಿಯನ್ನು ಹಿಡಿದಿದ್ದಾರೆ. ಇವರೂ ಅಧಿಕಾರಿಗೆ ಲಂಚ ನೀಡಿ ಮೋಸದಿಂದ ಕಳೆದು ಹೋಗಿರುವ ಜಮೀನನ್ನು ಮರಳಿ ಪಡೆಯಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.