ಅಮರಾವತಿ: ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಕಲ್ಯಾಣ ಯೋಜನೆಗಳಿಗೆ ಇಡಲಾಗಿದ್ದ ಅಂದಿನ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಹೆಸರನ್ನು ಟಿಡಿಪಿ ನೇತೃತ್ವದ ರಾಜ್ಯ ಸರ್ಕಾರ ಬದಲಿಸಿ, ಸೋಮವಾರ ಮರುನಾಮಕರಣ ಮಾಡಿದೆ.
ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ತಾಯಂದಿರಿಗಾಗಿ ಜಾರಿಗೆ ತರಲಾಗಿದ್ದ ‘ಜಗನಣ್ಣ ಅಮ್ಮ ವೋಡಿ’ ಯೋಜನೆಯ ಹೆಸರನ್ನು ‘ತಲ್ಲಿಕಿ ವಂದನಮ್’ ಎಂದು ಬದಲಿಸಲಾಗಿದೆ. ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳ ಕಿಟ್ ನೀಡುವ ‘ಜಗನಣ್ಣ ವಿದ್ಯಾ ಕನುಕಾ’ ಯೋಜನೆಯ ಹೆಸರನ್ನು ‘ಸರ್ವಪಲ್ಲಿ ರಾಧಾಕೃಷ್ಣನ್ ವಿದ್ಯಾ ಮಿತ್ರಾ’ ಎಂದು ಸರ್ಕಾರ ಮರು ನಾಮಕರಣ ಮಾಡಿದೆ.
ಅದೇ ರೀತಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ‘ಜಗನಣ್ಣ ಗೋರುಮುದ್ದ’ ಯೋಜನೆಯ ಹೆಸರನ್ನು, ‘ಡೊಕ್ಕ ಸೀತಮ್ಮ ಮಧ್ಯಾಹ್ನ ಬದಿ ಭೋಜನಂ’ ಎಂದು ಬದಲಿಸಲಾಗಿದೆ. ಶಾಲೆ ನವೀಕರಣ ಯೋಜನೆಗೆ ಹಿಂದಿನ ಸರ್ಕಾರ ಇಟ್ಟಿದ್ದ, ‘ಮನ ಬದಿ ನಾಡು ನೇಡು’ ಯೋಜನೆಯ ಹೆಸರನ್ನು ‘ಮನ ಬದಿ ಮನ ಭವಿಷ್ಯಕ್ತು’ ಎಂದು ಹೆಸರಿಡಲಾಗಿದೆ.
ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್ ನೀಡುವ ‘ಸ್ವಚ್ಛ’ ಯೋಜನೆಯ ಹೆಸರನ್ನು, ‘ಬಾಲಿಕಾ ರಕ್ಷಾ’ ಎಂದು ಮರು ನಾಮಕರಣ ಮಾಡಲಾಗಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲೆಗಳಿಗೆ ಆರ್ಥಿಕ ನೆರವು ನೀಡುವ ‘ಜಗನಣ್ಣ ಅನಿಮುತ್ಯಲು’ ಯೋಜನೆಯ ಹೆಸರನ್ನು, ‘ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರಂ’ ಎಂದು ಬದಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ನಾರಾ ಲೋಕೇಶ್, ‘ವೈಎಸ್‌ಆರ್‌ಸಿಪಿ ಸರ್ಕಾರವು ಶಿಕ್ಷಣ ಕ್ಷೇತ್ರವನ್ನು ನಾಶಗೊಳಿಸಿದೆ. ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರ ಅದನ್ನು ಶುದ್ಧೀಕರಿಸುವ ವಾಗ್ದಾನ ನೀಡಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.