ಹೈದರಾಬಾದ್: ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸಲು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು ಎಂಬ ನಿಯಮ ರೂಪಿಸಲು ಆಂಧ್ರ ಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
ಇದಕ್ಕಾಗಿ ಎರಡು ದಶಕಗಳ ಹಿಂದಿನ ‘ಇಬ್ಬರು ಮಕ್ಕಳ’ ನೀತಿಯನ್ನು ಎನ್.ಚಂದ್ರಬಾಬು ನಾಯ್ಡು ಅವರ ಸರ್ಕಾರವು ಆಗಸ್ಟ್‌ನಲ್ಲಿಯೇ ರದ್ದು ಮಾಡಿದೆ.
ಹಳೆಯ ನೀತಿಯಡಿ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಪರ್ಧಿಸಿದರೆ ಅವರನ್ನು ಅನರ್ಹಗೊಳಿಸಬಹುದಿತ್ತು.
ಈ ನೀತಿ ರದ್ದು ಮಾಡಲು ಆಂಧ್ರ ಪ್ರದೇಶ ಮಹಾನಗರ ಪಾಲಿಕೆ ಕಾಯ್ದೆ– 1955, ಆಂಧ್ರಪ್ರದೇಶ ಪಂಚಾಯತ್ ರಾಜ್ ಕಾಯ್ದೆ–1994, ಆಂಧ್ರ ಪ್ರದೇಶ ಪಾಲಿಕೆಗಳ ಕಾಯ್ದೆ–1965ಕ್ಕೆ ತಿದ್ದುಪಡಿ ಮಾಡಲಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಆಂಧ್ರಪ್ರದೇಶದಲ್ಲಿ ಒಟ್ಟು ಫಲವತ್ತತೆಯ ಪ್ರಮಾಣ (ಟಿಎಫ್‌ಆರ್) 1.70ಕ್ಕಿಂತ ಕಡಿಮೆ ಇದೆ. ಇದು ರಾಷ್ಟ್ರೀಯ ಸರಾಸರಿ 1.91ಕ್ಕಿಂತ ಕಡಿಮೆ.
ಕಳೆದ ವಾರ ನಾಯ್ಡು ಅವರು, ‘ಜನಸಂಖ್ಯಾ ಬಿಕ್ಕಟ್ಟು’ ಉಂಟಾಗಿದೆ. ಮಕ್ಕಳನ್ನು ಪಡೆಯುವವರ ಸಂಖ್ಯೆ ತಗ್ಗಿದೆ, ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದ್ದರು.
‘ರಾಜ್ಯದಲ್ಲಿ ಜನನ ದರ ಏರಿಕೆಯಾಗಬೇಕು. ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಬಗ್ಗೆ ಕುಟುಂಬಗಳು ಯೋಚಿಸಬೇಕು. ಈ ಹಿಂದೆ ಜನನ ನಿಯಂತ್ರಣದ ಬಗ್ಗೆ ಹೇಳಿದ್ದೆ. ಆದರೆ ಈಗ ಸಮಯ ಭಿನ್ನವಾಗಿದೆ. ಭವಿಷ್ಯಕ್ಕಾಗಿ ಜನನ ದರವನ್ನು ಹೆಚ್ಚಿಸಬೇಕಿದೆ’ ಎಂದು ಹೇಳಿದ್ದರು.
ಒಟ್ಟು ಫಲವತ್ತತೆಯ ಪ್ರಮಾಣ, ಕರ್ನಾಟಕದಲ್ಲಿ 1.70, ತೆಲಂಗಾಣದಲ್ಲಿ 1.82, ಕೇರಳದಲ್ಲಿ 1.80, ತಮಿಳುನಾಡಿನಲ್ಲಿ 1.80ರಷ್ಟಿದೆ.
‘ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧಿತ್ವಕ್ಕೆ ಕುತ್ತು?’
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ‘ದಕ್ಷಿಣದ ರಾಜ್ಯಗಳು ಕುಟುಂಬ ಯೋಜನೆಯ ಪ್ರತಿಪಾದಕ ರಾಜ್ಯಗಳು. ಕೇರಳವು 1988ರಲ್ಲಿ ಮೊದಲ ಬಾರಿಗೆ ಫಲವತ್ತತೆಯ ಪ್ರಮಾಣವನ್ನು ಸರಿದೂಗಿಸುವ ಮಟ್ಟ ತಲುಪಿತು. ನಂತರ 1993ರಲ್ಲಿ ತಮಿಳುನಾಡು 2001ರಲ್ಲಿ ಆಂಧ್ರಪ್ರದೇಶ ಮತ್ತು 2005ರಲ್ಲಿ ಕರ್ನಾಟಕ ಆ ಹಂತವನ್ನು ತಲುಪಿತು. ಆದರೆ ಈ ಯಶಸ್ಸು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧಿತ್ವವನ್ನು ತಗ್ಗಿಸುತ್ತದೆ ಎಂಬ ಆತಂಕ ಈಗ ಎದುರಾಗಿದೆ’ ಎಂದು ಹೇಳಿದ್ದಾರೆ. ‘ಸುದೀರ್ಘ ಕಾಲದಿಂದ ನೆನಗುದಿಗೆ ಬಿದ್ದಿರುವ ಜನಗಣತಿಯು ಶೀಘ್ರ ಆರಂಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಇದನ್ನು ಬಳಸಿಕೊಳ್ಳಲಾಗುತ್ತದೆಯೇ? ದಕ್ಷಿಣ ರಾಜ್ಯಗಳ ಯಶಸ್ಸಿಗೆ ‘ಶಿಕ್ಷೆ’ ನೀಡುವಂತಾಗಬಾರದು’ ಎಂದು ಅವರು ಹೇಳಿದ್ದಾರೆ.
ಪುನರ್‌ವಿಂಗಡಣೆ– ಹೆಚ್ಚು ಮಕ್ಕಳನ್ನು ಪಡೆಯಲು ಪ್ರೇರಣೆ: ಸ್ಟಾಲಿನ್
ಚೆನ್ನೈ: ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯು 16 ಮಕ್ಕಳನ್ನು ಪಡೆಯುವ ಕನಸಿಗೆ ಪೂರಕವಾಗಬಹುದು. ಆದರೆ ತಾವೆಲ್ಲರೂ ಮಕ್ಕಳಿಗೆ ತಮಿಳು ಹೆಸರನ್ನೇ ನಾಮಕರಣ ಮಾಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಸೋಮವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಉಲ್ಲೇಖಿಸಿ ‘ನೂತನ ದಂಪತಿಗಳು ಕೆಲವೇ ಮಕ್ಕಳನ್ನು ಪಡೆಯಬೇಕೆಂಬ ಯೋಚನೆಯನ್ನು ಕೈಬಿಡಬಹುದು. ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯು ಹೆಚ್ಚು ಮಕ್ಕಳನ್ನು ಪಡೆಯಲು ಪ್ರೇರೇಪಿಸಬಹುದು’ ಎಂದು ಹೇಳಿದರು. ‘ಈ ಹಿಂದೆ ಹಿರಿಯರು 16 ಮಕ್ಕಳನ್ನು ಪಡೆಯುವಂತೆ ನವದಂಪತಿಗಳಿಗೆ ಆಶೀರ್ವದಿಸುತ್ತಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.