ADVERTISEMENT

ಮೂರು ದಿನಗಳಲ್ಲಿ 86 ಪ್ರಕರಣ: ಆಂಧ್ರ ಪೊಲೀಸ್‌, ಟಿಡಿಪಿ ವಿರುದ್ಧ YSRCP ಕಿಡಿ

ಪಿಟಿಐ
Published 5 ನವೆಂಬರ್ 2024, 13:27 IST
Last Updated 5 ನವೆಂಬರ್ 2024, 13:27 IST
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ   

ಅಮರಾವತಿ: ‘ಕಳೆದ ಮೂರು ದಿನಗಳಲ್ಲಿ ಪಕ್ಷದ ಸಾಮಾಜಿಕ ಮಾಧ್ಯಮದ ಕಾರ್ಯಕರ್ತರ ವಿರುದ್ಧ ಆಂಧ್ರ ಪೊಲೀಸರು 86 ‘ಸುಳ್ಳು’ ಪ್ರಕರಣಗಳನ್ನು ದಾಖಲಿಸಿದ್ದಾರೆ’ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

‘ನಮ್ಮ ಪಕ್ಷದ ಕಾರ್ಯಕರ್ತರು ಆಡಳಿತ ಪಕ್ಷದ ಲೋಪಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದರು. ಹಾಗಾಗಿ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ವೈಎಸ್‌ಆರ್‌ಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಯಾವುದೇ ನೋಟಿಸ್ ನೀಡದೇ ರೈತರು, ಸಾಮಾಜಿಕ ಮಾಧ್ಯಮದ ಸಂಯೋಜಕರು, ಕಾರ್ಯಕರ್ತರನ್ನು ಬಂಧಿಸಲಾಗಿದೆ’ ಎಂದು ದೂರಿದೆ.

ADVERTISEMENT

‘ಟಿಡಿಪಿ ಸದಸ್ಯರು ನೀಡಿದ ದೂರುಗಳ ಆಧಾರದ ಮೇಲೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎನ್‌ಟಿಆರ್‌ ಜಿಲ್ಲೆಯೊಂದರಲ್ಲೇ 61 ಪ್ರಕರಣಗಳು ದಾಖಲಾಗಿವೆ. ಶ್ರೀಕಾಕುಳಂ, ನಿಲ್ಲೂರು, ಪಶ್ಚಿಮ ಗೋದಾವರಿ ಮತ್ತು ಇತರ ಜಿಲ್ಲೆಗಳಲ್ಲಿಯೂ ದೂರು ದಾಖಲಾಗಿವೆ. ಸರ್ಕಾರಕ್ಕೆ ಮಸಿ ಬಳಿಯಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಕ್ಷುಲ್ಲಕ ಕಾರಣ ನೀಡಲಾಗಿದೆ’ ಎಂದಿದೆ.

ಕಾರ್ಯಕರ್ತರ ಬಂಧನವನ್ನು ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಖಂಡಿಸಿದ್ದು, ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನದ ಮೇಲಿನ ನೇರ ದಾಳಿ ಎಂದು ಟೀಕಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಈ ಬಗ್ಗೆ ಪಿಟಿಐನೊಂದಿಗೆ ಮಾತನಾಡಿದ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸಿಎಚ್ ದ್ವಾರಕಾ ತಿರುಮಲ ರಾವ್, ‘ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕುತ್ತಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ತಿಳಿಸಿದರು.

‘ಕಾನೂನು ಏನೆಂದು ನಾವು ಅವರಿಗೆ ತಿಳಿಸಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳು ಬಂದರೂ ಹೇಗೆ ಸುಮ್ಮನಿರಲು ಸಾಧ್ಯವೇ? ಕಾನೂನು ಏನು ಹೇಳುತ್ತದೆಯೊ ಅದನ್ನು ನಾವು ಅನುಸರಿಸುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.