ADVERTISEMENT

ವೈಎಸ್‌ಆರ್‌ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರಿಗೆ ನೋಟಿಸ್

ವಿಪಕ್ಷಗಳ ನಾಯಕರು, ಅವರ ಕುಟುಂಬಸ್ಥರ ವಿರುದ್ಧ ಅಶ್ಲೀಲ ಪೋಸ್ಟ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 19:30 IST
Last Updated 13 ನವೆಂಬರ್ 2024, 19:30 IST
-
-   

ಹೈದರಾಬಾದ್‌: ವಿರೋಧ ಪಕ್ಷಗಳ ನಾಯಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಷಯವಸ್ತುಗಳನ್ನು ಪೋಸ್ಟ್‌ ಮಾಡುತ್ತಿದ್ದ ಆರೋಪದಡಿ ವೈ.ಎಸ್‌.ಆರ್‌.ಕಾಂಗ್ರೆಸ್‌ ಪಕ್ಷದ ಸಾವಿರಾರು ಕಾರ್ಯಕರ್ತರಿಗೆ ಆಂಧ್ರಪ್ರದೇಶ ಪೊಲೀಸರು ನೋಟಿಸ್‌ಗಳನ್ನು ಕಳುಹಿಸಿದ್ದಾರೆ.

ಕಳೆದ ಕೆಲ ದಿನಗಳಲ್ಲಿ, ಈ ಸಂಬಂಧ 55 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಪೊಲೀಸರ ಈ ಕ್ರಮವು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 

ಪ್ರಕಾಶಂ ಜಿಲ್ಲೆಯ ಮದ್ದಿಪಾಡು ಪೊಲೀಸ್‌ ಠಾಣೆ ಪೊಲೀಸರು ಬುಧವಾರ ಹೈದರಾಬಾದ್‌ಗೆ ಬಂದು, ಖ್ಯಾತ ಚಿತ್ರ ನಿರ್ದೇಶಕ ರಾಮಗೋಪಾಲ್‌ ವರ್ಮಾ ಅವರಿಗೆ ನೋಟಿಸ್‌ ನೀಡಿದ್ದಾರೆ.

ADVERTISEMENT

ರಾಮಗೋಪಾಲ್‌ ವರ್ಮಾ ಅವರು ಇತ್ತೀಚೆಗೆ, ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಕುಟುಂಬ ಸದಸ್ಯರ ತಿರುಚಿದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ.

ವಿಚಾರಣೆಗಾಗಿ ನ.19ರಂದು ತಮ್ಮ ಮುಂದೆ ಹಾಜರಾಗುವಂತೆ ರಾಮಗೋಪಾಲ್‌ ವರ್ಮಾ ಅವರಿಗೆ ಪೊಲೀಸರು ಸೂಚಿಸಿದ್ದಾರೆ.

ವೈ.ಎಸ್‌.ಜಗನ್‌ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ, ಅವರ ಸಂಪುಟದಲ್ಲಿ ಸಚಿವರಾಗಿದ್ದ ಕಾಕಾಣಿ ಗೋವರ್ಧನ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. 

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮಾಜಿ ಮುಖ್ಯಸ್ಥ ಸಜ್ಜಲ ಭಾರ್ಗವ ರೆಡ್ಡಿ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾರ್ಗವ ರೆಡ್ಡಿ ಅವರು ಜಗನ್‌ಮೋಹನ್‌ ರೆಡ್ಡಿ ಅವರ ಆಪ್ತ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಜ್ಜಲ ರಾಮಕೃಷ್ಣ ರೆಡ್ಡಿ ಅವರ ಪುತ್ರ. ಬಂಧನ ಭೀತಿ ಎದುರಿಸುತ್ತಿರುವ ಭಾರ್ಗವ ರೆಡ್ಡಿ, ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಜಗನ್‌ ಮೋಹನ್‌ ರೆಡ್ಡಿ ಅವರ ತವರು, ಕಡಪ ಜಿಲ್ಲೆಯ ಪುಲಿವೆಂದುಲ ನಿವಾಸಿ ವರ‍್ರಾ ರವೀಂದ್ರ ರೆಡ್ಡಿ ಅವರು ವಿರೋಧ ಪಕ್ಷಗಳ ನಾಯಕರು ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್‌ ಮಾಡಿದ್ದಾರೆ ಎಂಬ ಆರೋಪವಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‍ರವೀಂದ್ರ ರೆಡ್ಡಿ ಹಾಗೂ ಇವರಿಗೆ ಆಶ್ರಯ ನೀಡಿದ್ದ ಆರೋಪದಡಿ ಗುರ‍್ರಂಪಾಟಿ ವೆಂಕಟಸುಬ್ಬ ರೆಡ್ಡಿ ಹಾಗೂ ಗುರಜಾಲ ಉದಯಕುಮಾರ್ ರೆಡ್ಡಿ ಅವರನ್ನು ಬಂಧಿಸಿದ್ದ ಪೊಲೀಸರು, ಕೋರ್ಟ್‌ಗೆ ಹಾಜರುಪಡಿಸಿದ್ದರು. ಅವಹೇಳನಕಾರಿ ಪೋಸ್ಟ್‌ ಮಾಡಿದ್ದಾಗಿ ರವೀಂದ್ರ ಅವರು ತಪ್ಪೊಪ್ಪಿಕೊಂಡಿದ್ದಾರೆ.

2ನೇ ಹೆಚ್ಚುವರಿ ಕಿರಿಯ ಸಿವಿಲ್‌ ನ್ಯಾಯಾಧೀಶೆ ಭಾರ್ಗವಿ ಅವರು ಈ ಮೂವರಿಗೆ ಇತ್ತೀಚೆಗೆ ಜಾಮೀನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.