ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಣ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 5ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಮಂಗಳವಾರ ನಡೆಸಿತು. ಈ ವೇಳೆ, ಕೇಂದ್ರ ಜಲ ಆಯೋಗದ ವಕೀಲರು, ‘ಸಚಿವ ಸಂಪುಟವು ಸಿದ್ದಪಡಿಸಿದ ನ್ಯಾಯಮಂಡಳಿ ಸ್ಥಾಪನೆಯ ಟಿಪ್ಪಣಿಗೆ ಕೇಂದ್ರ ಜಲಶಕ್ತಿ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಟಿಪ್ಪಣಿಗಳನ್ನು ಗೃಹ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಹಣಕಾಸು ಸಚಿವಾಲಯ ಹಾಗೂ ಪ್ರಧಾನಿ ಕಚೇರಿಗೆ ಈ ಹಿಂದೆಯೇ ಕಳುಹಿಸಲಾಗಿದೆ. ನ್ಯಾಯಮಂಡಳಿ ರಚನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಬೇಕು. ಬಳಿಕ ಅಧಿಸೂಚನೆ ಪ್ರಕಟವಾಗಬೇಕು. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದರು. ಬಳಿಕ ವಿಚಾರಣೆ ಮುಂದೂಡಲಾಯಿತು.
ಈ ಜಲ ವಿವಾದಗಳನ್ನು ಬಗೆಹರಿಸಲು ‘ದಕ್ಷಿಣ ಪಿನಾಕಿನಿ ಜಲವಿವಾದ ನ್ಯಾಯಮಂಡಳಿ’ ರಚಿಸಲು ಕೇಂದ್ರ ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ಡಿಸೆಂಬರ್‌ನಲ್ಲಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.