ಅಮರಾವತಿ: ಕರ್ನಾಟಕ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಗ್ಯಾರಂಟಿಗಳ ಮೂಲಕ ಮತದಾರರನ್ನು ಸೆಳೆಯಲು ಯಶಸ್ವಿಯಾಗಿರುವ ಕಾಂಗ್ರೆಸ್, ಈಗ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ತಂತ್ರ ಪ್ರಯೋಗಿಸುತ್ತಿದೆ.
ಮೇ 13ರಂದು ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಬಡ ಕುಟುಂಬಕ್ಕೆ ವಾರ್ಷಿಕ ₹1 ಲಕ್ಷ, ರೈತರ ₹2 ಲಕ್ಷ ಸಾಲ ಮನ್ನಾ ಸೇರಿದಂತೆ 9 ‘ಗ್ಯಾರಂಟಿ’ಗಳನ್ನು ಘೋಷಿಸಿದೆ.
ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದ ಆಂಧ್ರ ಪ್ರದೇಶದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್.ಶರ್ಮಿಳಾ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ 10 ವರ್ಷ ವಿಶೇಷ ಸ್ಥಾನಮಾನ ನೀಡುವುದು ಪಕ್ಷದ ಪ್ರಥಮ ಗ್ಯಾರಂಟಿಯಾಗಿದೆ ಎಂದರು.
‘ಸತತ ಚಿಂತನೆಯ ನಂತರ ಕಾಂಗ್ರೆಸ್ ಪಕ್ಷವು ಅದ್ಭುತ ಗ್ಯಾರಂಟಿಗಳನ್ನು ಘೋಷಿಸಿದೆ. ಮಹಿಳಾ ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ ₹8,500ರಂತೆ ವಾರ್ಷಿಕ ₹1 ಲಕ್ಷ ನೀಡಲಾಗುವುದು. ಇದು ಪಕ್ಷದ ಎರಡನೆಯ ಗ್ಯಾರಂಟಿಯಾಗಿದೆ’ ಎಂದು ಹೇಳಿದರು.
ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜತೆಗೆ ಶೇ 50ರಷ್ಟು ಹೆಚ್ಚುವರಿ ಹಣ, ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕನಿಷ್ಠ ಕೂಲಿ ₹400ಕ್ಕೆ ಏರಿಕೆ, ಕೆ.ಜಿ.ಯಿಂದ ಪಿ.ಜಿ.ವರೆಗೆ ಉಚಿತ ಶಿಕ್ಷಣದ ಭರವಸೆಗಳನ್ನು ಘೋಷಣೆ ಮಾಡಿದೆ.
ಪ್ರತಿ ವಸತಿರಹಿತ ಕುಟುಂಬಕ್ಕೆ ₹5 ಲಕ್ಷ ವೆಚ್ಚದ ಮನೆ, ಫಲಾನುಭವಿಗಳಿಗೆ ಮಾಸಿಕ ₹4,000 ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಅಂಗವಿಕಲರಿಗೆ ₹6,000 ನೀಡಲಾಗುವುದು ಎಂದು ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.