ಅಮರಾವತಿ: ‘ವಿಶಾಖಪಟ್ಟಣದ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯ ಪುನರಾರಂಭಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ‘ಕಾರ್ಖಾನೆ ವಿಸ್ತರಣೆಗೆ ಅನುಮತಿ ನೀಡಿದ್ದೇ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರ’ ಎಂದು ದೂರಿದ್ದಾರೆ.
‘ದುರಂತಕ್ಕೆ ಕಾರಣರಾದವರನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
‘ಪ್ರಕರಣದ ತನಿಖೆಗೆ ಕೇಂದ್ರದಿಂದ ರಚಿಸಿದ ಸಮಿತಿ ಸೇರಿದಂತೆ ಎಲ್ಲಾ ಸಮಿತಿಗಳಿಂದ ವರದಿಗಳನ್ನು ಪಡೆದ ನಂತರ, ಕಂಪನಿಯ ಉತ್ತರವನ್ನು ಕೇಳುತ್ತೇವೆ. ಆ ಉತ್ತರಗಳನ್ನು ತಜ್ಞರು ಪರಿಶೀಲಿಸುತ್ತಾರೆ. ಸಮಿತಿಗಳು ಯಾವುದೇ ಕ್ರಮಗಳನ್ನು ಶಿಫಾರಸು ಮಾಡಿದರೂ, ಆ ಪ್ರಕ್ರಿಯೆಗಳು ಪಾರದರ್ಶಕವಾಗಿ ಕಾರ್ಯಗತಗೊಳ್ಳುತ್ತವೆ’ ಎಂದು ಅವರು ಹೇಳಿದ್ದಾರೆ.
‘ಕಂಪನಿಯು ಈಗಾಗಲೇ ನಡೆಸುತ್ತಿರುವ ಚಟುವಟಿಕೆಗಳನ್ನು ಅದೇ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಅನುಮತಿ ನೀಡುವುದಿಲ್ಲ. ಕಂಪನಿಗೆ ಪೂರೈಕೆ ಮಾಡಿದ್ದ ಕಚ್ಚಾ ಸಾಮಗ್ರಿಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ’ ಎಂದು ರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.