ಅಮರಾವತಿ: ಮೂರು ರಾಜಧಾನಿಗಳನ್ನು ನಿರ್ಮಿಸುವ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಹಿಂದೆ ಸರಿದಿದ್ದು, ಈ ಸಂಬಂಧ ಅಂಗೀಕರಿಸಿದ್ದ ಕಾಯ್ದೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ.
ಅಮರಾವತಿಗೆ ಇರುವ ಏಕೈಕ ರಾಜಧಾನಿಯ ಸ್ಥಾನಮಾನವನ್ನು ತೆಗೆದುಹಾಕುವುದು. ಕಾರ್ಯಾಂಗವನ್ನು ವಿಶಾಖಪಟ್ಟಣಂಗೆ ಸ್ಥಳಾಂತರಿಸುವುದು ಮತ್ತು ಕರ್ನೂಲ್‌ನಲ್ಲಿ ನ್ಯಾಯಾಂಗ ರಾಜಧಾನಿ ಸ್ಥಾಪಿಸುವ ಉದ್ದೇಶದಿಂದ 2020 ಜುಲೈನಲ್ಲಿ ಸರ್ಕಾರವು ಎರಡು ಕಾಯ್ದೆಗಳನ್ನು ಅಂಗೀಕರಿಸಿತ್ತು.
ಈ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಮರಾವತಿಯ ರೈತರು ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳೂ ಕಾಯ್ದೆಗೆ ಅಸಮ್ಮತಿ ಸೂಚಿಸಿದ್ದವು.
ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಬಳಿಕ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ಈ ನಿರ್ಧಾರ ಹೊರಬಿದ್ದಿದೆ.
ಕಾಯ್ದೆಯನ್ನು ಹಿಂಪಡೆಯಲು ಸರ್ಕಾರವು ನಿರ್ಧರಿಸಿದೆ ಎಂದು ಅಡ್ವೊಕೇಟ್ ಜನರಲ್ ಎಸ್. ಸುಬ್ರಹ್ಮಣ್ಯಂ ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಾಯ್ದೆ ಹಿಂಪಡೆಯುವ ಕುರಿತು ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದೂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಮರಾವತಿಯ ರೈತರು ಹಾಗೂ ಇತರರು ಕಾಯ್ದೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ರಾಜಧಾನಿಯನ್ನು ಸ್ಥಳಾಂತರಿಸುವ ಕಾರ್ಯವನ್ನು ತಡೆಹಿಡಿಯುವಂತೆ ಕಳೆದ ವರ್ಷ ಆಂಧ್ರಪ್ರದೇಶ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.