ADVERTISEMENT

ತಿರುಪತಿ ಲಾಡು ವಿವಾದ: ಒಂಬತ್ತು ಸದಸ್ಯರ SIT ರಚಿಸಿದ ಆಂಧ್ರಪ್ರದೇಶ ಸರ್ಕಾರ

ಪಿಟಿಐ
Published 27 ಸೆಪ್ಟೆಂಬರ್ 2024, 6:18 IST
Last Updated 27 ಸೆಪ್ಟೆಂಬರ್ 2024, 6:18 IST
<div class="paragraphs"><p>ತಿರುಮಲ ತಿರುಪತಿ ದೇವಸ್ಥಾನ ಮತ್ತು&nbsp;ತಿರುಪತಿ ಲಡ್ಡು</p></div>

ತಿರುಮಲ ತಿರುಪತಿ ದೇವಸ್ಥಾನ ಮತ್ತು ತಿರುಪತಿ ಲಡ್ಡು

   

ಅಮರಾವತಿ: ತಿರುಪತಿ ಪ್ರಸಾದವಾದ ಲಾಡುಗಳನ್ನು ಸಿದ್ಧಪಡಿಸಲು ಪೂರೈಕೆಯಾಗಿದ್ದ ಕಲಬೆರಕೆ ತುಪ್ಪ ವಿವಾದ ಕುರಿತು ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.

ಗುಂಟೂರು ವಲಯದ ಐಜಿಪಿ ಸರ್ವಶ್ರೇಷ್ಠ ತ್ರಿಪಾಠಿ ಅವರನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ADVERTISEMENT

ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪ ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಇತ್ತೀಚೆಗೆ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಪ ಮಾಡಿದ್ದರು.

ಅದಕ್ಕೆ ಪೂರಕವಾಗಿ, ಟಿಟಿಡಿಗೆ ಪೂರೈಕೆಯಾಗಿದ್ದ ತುಪ್ಪದಲ್ಲಿ ಹಂದಿ ಮತ್ತು ಇತರ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವ ಕುರಿತು ಗುಜರಾತ್‌ನ ಎನ್‌ಡಿಡಿಬಿ ಪ್ರಯೋಗಾಲಯದ ವರದಿಯನ್ನು ಟಿಡಿಪಿ ಪ್ರಕಟಿಸಿತ್ತು.

‌ತುಪ್ಪದ ಕಲಬೆರಕೆಯಿಂದ ತಿರುಪತಿಯ ಲಾಡುವಿನ ಪಾವಿತ್ರ್ಯಕ್ಕೆ ಮತ್ತು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು.

ವೈಎಸ್‌ಆರ್‌ಸಿಪಿ ವಿರೋಧ:

ಮುಖ್ಯಮಂತ್ರಿ ಅಡಿಯಲ್ಲಿ ಕೆಲಸ ನಿರ್ವಹಿಸುವ ಯಾವುದೇ ಏಜೆನ್ಸಿ ನಡೆಸುವ ತನಿಖೆ ಸಮರ್ಪಕವಾಗಿ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿರುವ ವೈಎಸ್‌ಆರ್‌ಸಿಪಿ, ‘ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು’ ಎಂದು ಒತ್ತಾಯಿಸಿದೆ.

ಪ್ರಸಾದ ತಯಾರಿಕೆ: ಸುಧಾರಣೆ ಆಗಬೇಕು’

ತಿರುಪತಿ ಲಾಡುವಿನ ಕಲಬೆರಕೆ ವಿವಾದದ ಬೆನ್ನಲ್ಲೇ ಅಯೋಧ್ಯೆ ಮಥುರಾ ಸೇರಿದಂತೆ ಉತ್ತರ ಪ್ರದೇಶದ ಹಲವು ದೇವಾಲಯಗಳ ಪ್ರತಿನಿಧಿಗಳು ಪ್ರಸಾದ ಸಿದ್ಧಪಡಿಸುವ ಮತ್ತು ವಿತರಿಸುವ ಕಾರ್ಯದಲ್ಲಿ ಸುಧಾರಣೆಗಳನ್ನು ತರಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ‘ಹೊರಗಿನ ಏಜೆನ್ಸಿಗಳ ಮೂಲಕ ಪ್ರಸಾದ ಸಿದ್ಧಪಡಿಸುವ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದು ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಒತ್ತಾಯಿಸಿದ್ದಾರೆ. ದೇವಾಲಯಗಳಲ್ಲಿ ಬಳಸುವ ತುಪ್ಪದ ಶುದ್ಧತೆ ಕುರಿತು ಕಾಳಜಿ ವ್ಯಕ್ತಪಡಿಸಿರುವ ಅವರು ‘ದೇವಾಲಯಗಳ ಅರ್ಚಕರ ನಿಗಾದಲ್ಲಿಯೇ ಎಲ್ಲ ಬಗೆಯ ಪ್ರಸಾದ ಸಿದ್ಧಪಡಿಸುವ ಕಾರ್ಯ ನಡೆಯಬೇಕು’ ಎಂದು  ಹೇಳಿದ್ದಾರೆ. ‘ದೇಶದಾದ್ಯಂತ ಮಾರಾಟವಾಗುತ್ತಿರುವ ಎಣ್ಣಿ ಮತ್ತು ತುಪ್ಪದ ಗುಣಮಟ್ಟವನ್ನೂ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ. ದೇವಾಲಯಗಳ ಪ್ರಸಾದದಲ್ಲಿ ಅನುಚಿತವಾದ ಪದಾರ್ಥಗಳನ್ನು ಮಿಶ್ರಣಗೊಳಿಸುವುದರ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದ್ದಂತಿದೆ ಎಂದು ಅವರು ಆರೋಪಿಸಿದ್ದಾರೆ. ಸಾತ್ವಿಕ ಪ್ರಸಾದ: ಪ್ರಾಚೀನ ಪಾಕ ಶೈಲಿಯಲ್ಲಿ ಪ್ರಸಾದ ಸಿದ್ಧಪಡಿಸುವ ವಿಧಾನಕ್ಕೆ ಮರಳುವ ನಿರ್ಧಾರವನ್ನು ಮಥುರಾದ ರಕ್ಷಾ ಸಂಘ ಪ್ರಕಟಿಸಿದೆ. ಸಿಹಿ ತಿನಿಸುಗಳ ಬದಲಿಗೆ ಹಣ್ಣು ಮತ್ತು ಇತರ ನೈಸರ್ಗಿಕ ಪದರ್ಥಗಳನ್ನು ಬಳಸಿ ಪ್ರಸಾದ ಸಿದ್ಧಪಡಿಸಲಾಗುವುದು ಎಂದು ಅದು ಹೇಳಿದೆ.  ಶುದ್ಧ ಸಾತ್ವಿಕ ಪ್ರಸಾದವನ್ನು ಸಿದ್ಧಪಡಿಸುವ ಸಂಪ್ರದಾಯಿಕ ಆಚರಣೆಗಳಿಗೆ ಮರಳಲು ಧಾರ್ಮಿಕ ಮುಖಂಡರು ಒಮ್ಮತ ಸೂಚಿಸಿದ್ದಾರೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಸೌರಭ್‌ ಗೌರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.