ADVERTISEMENT

ಆಂಧ್ರ ಪ್ರದೇಶ‌ | ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧ: ಸಚಿವರ ಮನೆಗೆ ಬೆಂಕಿ

ಹಿಂಸಾಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮೇ 2022, 18:18 IST
Last Updated 24 ಮೇ 2022, 18:18 IST
ಅಮಲಾಪುರಂ ಪಟ್ಟಣದಲ್ಲಿ ನಡೆದ ಹಿಂಸಾಚಾರ– ಚಿತ್ರ ಕೃಪೆ: ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವೊಂದರ ಸ್ಕ್ರೀನ್‌ ಶಾಟ್‌
ಅಮಲಾಪುರಂ ಪಟ್ಟಣದಲ್ಲಿ ನಡೆದ ಹಿಂಸಾಚಾರ– ಚಿತ್ರ ಕೃಪೆ: ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊವೊಂದರ ಸ್ಕ್ರೀನ್‌ ಶಾಟ್‌   

ಅಮರಾವತಿ: ಉದ್ರಿಕ್ತ ಪ್ರತಿಭಟನಾಕಾರರು ಆಂಧ್ರ ಪ್ರದೇಶದ ಸಾರಿಗೆ ಸಚಿವ ಪಿ.ವಿಶ್ವರೂಪು ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ. ಹೊಸದಾಗಿ ರಚನೆಯಾಗಿರುವ ಕೋನಸೀಮ ಜಿಲ್ಲೆಯ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಭಟನೆಯ ವೇಳೆ ಈ ಘಟನೆ ನಡೆದಿದೆ.

ಕೋನಸೀಮ ಜಿಲ್ಲೆಯನ್ನು 'ಬಿ.ಆರ್‌.ಅಂಬೇಡ್ಕರ್‌ ಕೋನಸೀಮ' ಎಂದು ಬದಲಾಯಿಸುವ ಪ್ರಸ್ತಾಪದ ವಿರುದ್ಧ ಅಮಲಾಪುರಂ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಅದರಿಂದ ಉದ್ರೇಕಗೊಂಡ ಗುಂಪು ಬೆಂಕಿ ಹಚ್ಚುವ ಮೂಲಕ ಆಕ್ರೋಶ ಹೊರಹಾಕಿದೆ.

ಕೆಲವು ರಾಜಕೀಯ ಪಕ್ಷಗಳು ಹಾಗೂ ಸಮಾಜ ಘಾತುಕ ಶಕ್ತಿಗಳು ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ನಡೆಸಲು ಪ್ರೇರೇಪಣೆ ನೀಡಿರುವುದಾಗಿ ಗೃಹ ಸಚಿವೆ ತಾನೇಟಿ ವನಿತಾ ಆರೋಪಿಸಿದ್ದಾರೆ. ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, 20ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ADVERTISEMENT

ಸಚಿವ ವಿಶ್ವರೂಪು ಅವರ ನಿವಾಸ, ಕಚೇರಿ, ಪೊಲೀಸ್‌ ವಾಹನ ಹಾಗೂ ಶಿಕ್ಷಣ ಸಂಸ್ಥೆಯ ಬಸ್‌ವೊಂದಕ್ಕೆ ಬೆಂಕಿ ಹಚ್ಚಲಾಗಿದೆ. ವಿಶ್ವರೂಪು ಮತ್ತು ಅವರ ಕುಟುಂಬದ ಸದಸ್ಯರು ಪೊಲೀಸರ ರಕ್ಷಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುತ್ತದೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವೆ ತಾನೇಟಿ ಹೇಳಿದ್ದಾರೆ.

ಪೂರ್ವ ಗೋದಾವರಿಯಿಂದ ಬೇರ್ಪಡಿಸಿ ಕೋನಸೀಮಾ ಜಿಲ್ಲೆಯನ್ನು ಏಪ್ರಿಲ್‌ 4ರಂದು ರಚಿಸಲಾಗಿದೆ. ಜಿಲ್ಲೆಯ ಹೆಸರನ್ನು ಬಿ.ಆರ್‌.ಅಂಬೇಡ್ಕರ್‌ ಕೋನಸೀಮ ಎಂದು ಬದಲಿಸುವ ಬಗ್ಗೆ ರಾಜ್ಯ ಸರ್ಕಾರವು ಪ್ರಸ್ತಾವಿತ ಅಧಿಸೂಚನೆ ಹೊರಡಿಸಿತ್ತು ಹಾಗೂ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ತಿಳಿಸಲಾಗಿತ್ತು.

ಕೋನಸೀಮ ಸಾಧನಾ ಸಮಿತಿಯು ಹೆಸರು ಬದಲಿಸುವ ಪ್ರಸ್ತಾಪವನ್ನು ವಿರೋಧಿಸಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಸಮಿತಿಯು ಪ್ರತಿಭಟನೆ ಆಯೋಜಿಸಿ, ಕೋನಸೀಮ ಹೆಸರು ಉಳಿಸಿಕೊಳ್ಳುವಂತೆ ಆಗ್ರಹಿಸಿತ್ತು. ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳಿಂದಾಗಿ ಪ್ರತಿಭಟನಾಕಾರರು ಉದ್ರಿಕ್ತರಾಗಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.