ADVERTISEMENT

16 ವರ್ಷದ ರಾಜಕೀಯ; ಡಿಸಿಎಂ ಆಗಿಯೇ ಆಂಧ್ರ ಪ್ರದೇಶ ವಿಧಾನಸಭೆಗೆ ಬಂದ ಪವನ್ ಕಲ್ಯಾಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2024, 5:53 IST
Last Updated 21 ಜೂನ್ 2024, 5:53 IST
<div class="paragraphs"><p>ಪವನ್ ಕಲ್ಯಾಣ್</p></div>

ಪವನ್ ಕಲ್ಯಾಣ್

   

ಪಿಟಿಐ ಚಿತ್ರ

ಅಮರಾವತಿ: ಆಂಧ್ರ ಪ್ರದೇಶ ವಿಧಾನಸಭೆಯ ಮೊದಲ ಅಧಿವೇಶನ ಇಂದು (ಶುಕ್ರವಾರ) ಆರಂಭವಾಗಿದ್ದು, ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.

ADVERTISEMENT

ಟಿಡಿಪಿ ಶಾಸಕ ಜಿ.ಬುಚ್ಚಯ್ಯ ಚೌಧರಿ ಅವರು ಹಂಗಾಮಿ ಸಭಾಪತಿಯಾಗಿ ಕಲಾಪ ನಡೆಸಿಕೊಟ್ಟರು.

ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಸುಮಾರು ಎರಡೂವರೆ ವರ್ಷಗಳ ಬಳಿಕ ಸದನಕ್ಕೆ ಹಾಜರಾದರು. ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ತಮ್ಮ 16 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಕಾಲಿಟ್ಟರು. ಪಿತಾಪುರಂ ಕ್ಷೇತ್ರದ ಶಾಸಕರಾಗಿರುವ ಅವರು ಉಪಮುಖ್ಯಮಂತ್ರಿಯಾಗಿಯೇ ಸದನಕ್ಕೆ ಬಂದದ್ದು ವಿಶೇಷ.

ಬೆಳಿಗ್ಗೆ 9.45ಕ್ಕೆ ಆರಂಭವಾದ ಕಲಾಪದ ವೇಳೆ ಮುಖ್ಯಮಂತ್ರಿ, ಕುಪ್ಪಂ ಶಾಸಕ ನಾಯ್ಡು ಅವರು ಮೊದಲಿಗರಾಗಿ ಹಾಗೂ ಅವರ ಹಿಂದೆಯೇ ಪವನ್‌ ಕಲ್ಯಾಣ್‌ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ, ಪುಲಿವೆಂದುಲ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರೂ ಇದೇ ವೇಳೆ ಪ್ರಮಾಣವಚನ ಸ್ವೀಕರಿಸಿದರು.

ನಾಯ್ಡು ಅವರು ಪ್ರಮಾಣವಚನದ ಬಳಿಕ ಹಂಗಾಮಿ ಸಭಾಪತಿ ಬಳಿಗೆ ತೆರಳಿ ಸಂತಸ ಹಂಚಿಕೊಂಡರು.

ಸಭಾಪತಿ ಹಾಗೂ ಉಪ ಸಭಾಪತಿ ಆಯ್ಕೆಯ ಚುನಾವಣೆಗೂ ಸದನ ಸಾಕ್ಷಿಯಾಗಲಿದೆ.

ಟಿಡಿಪಿ ಮೂಲಗಳ ಪ್ರಕಾರ, ನರಸಿಪಟ್ಟಣಂ ಶಾಸಕ ಸಿ.ಅಯ್ಯನ್ನಪತ್ರುಡು ಅವರು ಸಭಾಪತಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

175 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾಯ್ಡು ಅವರ ತೆಲುಗು ದೇಶಂ (ಟಿಡಿಪಿ), ಪವನ್‌ ಕಲ್ಯಾಣ್‌ ಅವರ ಜನಸೇನಾ ಹಾಗೂ ಬಿಜೆಪಿಯನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟವು 164 ಸ್ಥಾನಗಳನ್ನು ಗೆದ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.