ADVERTISEMENT

ಆಂಧ್ರ: ಸೂರ್ಯಲಂಕ ಬೀಚ್‌ನಲ್ಲಿ ಈಜಲು ಹೋಗಿ ಮೂವರು ಮಕ್ಕಳು ಸಾವು, ಮೂವರು ಕಣ್ಮರೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 13:54 IST
Last Updated 4 ಅಕ್ಟೋಬರ್ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ಸೂರ್ಯಲಂಕ ಬೀಚ್‌ನಲ್ಲಿ ಈಜಲು ಹೋಗಿದ್ದ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ ಮೂವರು ಕಣ್ಮರೆಯಾಗಿದ್ದಾರೆ.

ಈ ವೇಳೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬಾಪಟ್ಲ ಜಿಲ್ಲೆಯ ಎಸ್‌ಪಿ ವಕುಲ್‌ ಜಿಂದಾಲ್‌ ಅವರು ತಿಳಿಸಿದ್ದಾರೆ.

ದಸರಾ ರಜೆ ಕಳೆಯಲು ವಿದ್ಯಾರ್ಥಿಗಳ ಗುಂಪು ವಿಜಯವಾಡದಿಂದ ಸೂರ್ಯಲಂಕಕ್ಕೆ ಬಂದಿದ್ದರು. ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭ ಸಮುದ್ರದ ಆಳದತ್ತ ಸರಿದಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ಸಮುದ್ರದ ಮಧ್ಯೆ ಬಹಳ ದೂರದಿಂದ ಮೂವರು ಮಕ್ಕಳ ಮೃತದೇಹವನ್ನು ಹೊರ ತೆಗೆಯಲಾಗಿದೆ. ಕಾಣೆಯಾಗಿರುವ ಇನ್ನೂ ಮೂವರಿಗಾಗಿ ಶೋಧಕಾರ್ಯ ನಡೆದಿದೆ ಎಂದು ಎಸ್‌ಪಿ ಹೇಳಿದ್ದಾರೆ.

ADVERTISEMENT

ಮೃತರಲ್ಲಿ ಇಬ್ಬರು ಕ್ರಮವಾಗಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು. ಇನ್ನುಳಿದವರು 10ನೇ ತರಗತಿಯಲ್ಲಿ ಅನುತ್ತೀರ್ಣಗೊಂಡು ಕಲಿಕೆಯನ್ನು ಮೊಟಕುಗೊಳಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಗುಂಪಿನಲ್ಲಿದ್ದವರ ಪೈಕಿ ಕೆಲವರು ಕ್ಯಾಟರಿಂಗ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸೂರ್ಯಲಂಕದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿ ಬಂದಿದ್ದರು. ವಿಜಯವಾಡದಿಂದ ಸೂರ್ಯಲಂಕಕ್ಕೆ ರೈಲಿನ ಮೂಲಕ ಮಂಗಳವಾರ ಬೆಳಗ್ಗೆ ಬಂದಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.