ಬೆಂಗಳೂರು: ಬಹಳಷ್ಟು ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಬೀಪ್ ಶಬ್ದದೊಂದಿಗೆ ‘ತುರ್ತು ಸಂದರ್ಭದಲ್ಲಿ ಎಚ್ಚರಿಕೆ’ಯ ಸಂದೇಶವೊಂದು ಗುರುವಾರ ಬೆಳಿಗ್ಗೆ 11.45ರ ಸುಮಾರಿಗೆ ಬಂದಿದ್ದು, ಇದು ಪರೀಕ್ಷಾರ್ಥ ಪ್ರಯೋಗ ಎಂದು ಸರ್ಕಾರ ಹೇಳಿದೆ.
11.45ಕ್ಕೆ ಇಂಗ್ಲೀಷ್ ಸಂದೇಶ, 11.52ಕ್ಕೆ ಕನ್ನಡದಲ್ಲಿ ಅದೇ ಸಂದೇಶ ಪ್ರಸಾರವಾಯಿತು. ದೂರಸಂಪರ್ಕ ಇಲಾಖೆಯ ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಂ ಮೂಲಕ ಈ ಸಂದೇಶ ಬಂದ ಕೆಲವೇ ಕ್ಷಣಗಳಲ್ಲಿ ಇದರ ಸ್ಕ್ರೀನ್‌ಶಾಟ್‌ಗಳನ್ನು ಹಲವರು ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡು, ಇದೇನು ಮೀಮ್ ಅಥವಾ ಸ್ಪಾಮ್ ಸಂದೇಶವೇ...? ವೈರಸ್ ಇರಬಹುದೇ...? ಎಂಬಿತ್ಯಾದಿ ಎಂದು ಕೇಳಿದ್ದಾರೆ.
ದೇಶದ ಜನರ ಸುರಕ್ಷತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ದೇಶವ್ಯಾಪಿ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯ ಸಂದೇಶ ನೀಡುವ ಪ್ರಯೋಗ ನಡೆಸಿರುವುದಾಗಿ ಇಲಾಖೆ ಹೇಳಿದೆ. ಇಂಥ ಪ್ರಯೋಗಗಳನ್ನು ಹಲವು ಪ್ರದೇಶಗಳಲ್ಲಿ ಹಾಗೂ ಬೇರೆ ಬೇರೆ ಸಮಯಗಳಲ್ಲಿ ನಡೆಸಲಾಗುವುದು. ಆ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ಮತ್ತು ಅದರ ಪರಿಣಾಮಗಳ ಕುರಿತು ಪರೀಕ್ಷೆಗಳನ್ನು ನಡೆಸಲಾಗುವುದು ಎಂದಿದೆ.
ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ಸಂದೇಶ ಅಕ್ಷರ ರೂಪದಲ್ಲಿ ಹಾಗೂ ಧ್ವನಿ ರೂಪದಲ್ಲೂ ಪ್ರಸಾರವಾಯಿತು. ಭೂಕಂಪ, ಪ್ರವಾಹದಂತ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಈ ಮಾದರಿಯ ಸಂದೇಶವನ್ನು ಏಕಕಾಲಕ್ಕೆ ದೇಶವ್ಯಾಪಿ ಮೊಬೈಲ್ ಬಳಕೆದಾರರಿಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ ಎಂದು ಇಲಾಖೆ ತಿಳಿಸಿದೆ.
ದೊಡ್ಡ ಬೀಪ್ ಶಬ್ದದೊಂದಿಗೆ ಬಂದ ಸಂದೇಶದ ಕುರಿತು ಹಲವರು ಆತಂಕ ವ್ಯಕ್ತಪಡಿಸಿ, ಪಕ್ಕದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.