ನವದೆಹಲಿ: ತೀರಾ ವಿವಾದಕ್ಕೀಡಾಗಿರುವ ವೆಬ್ ಸರಣಿ ‘IC814- ಕಂದಹಾರ್ ಹೈಜಾಕ್’ನಲ್ಲಿ ತನ್ನ ಅನುಮತಿ ಇಲ್ಲದೆ ತಾನು ಪ್ರಕಟಿಸಿದ ಸುದ್ದಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಎಎನ್‌ಐ ಸುದ್ದಿ ಸಂಸ್ಥೆಯು ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ಗೆ ನೋಟಿಸ್ ನೀಡಿದೆ.
1999ರಲ್ಲಿ ಕಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್‌ನ ಐಸಿ814 ವಿಮಾನವನ್ನು ಉಗ್ರರು ಅಪಹರಿಸಿದ್ದರು. ಇದೇ ವಿಷಯ ವಸ್ತುವನ್ನು ಆಧರಿಸಿದ ವೆಬ್ ಸರಣಿ ಇದಾಗಿತ್ತು.
ಇದೇ ವಿಷಯವಾಗಿ ತಾನು ಪ್ರಕಟಿಸಿದ್ದ ಸುದ್ದಿಯನ್ನು ನೆಟ್‌ಫ್ಲಿಕ್ಸ್ ಬಳಸಿಕೊಂಡಿದೆ ಎಂದು ಎಎನ್‌ಐ ಆರೋಪಿಸಿದೆ. ಅನುಮತಿ ಇಲ್ಲದೆ ಮಾಹಿತಿ ಬಳಸಿಕೊಂಡ ನಾಲ್ಕು ಎಪಿಸೋಡ್‌ಗಳನ್ನು ಹಿಂಪಡೆಯಬೇಕು ಎಂದು ತನ್ನ ನೋಟಿಸ್‌ನಲ್ಲಿ ಹೇಳಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದೇ ವೆಬ್ ಸರಣಿಗೆ ಸಂಬಂಧಿಸಿದಂತೆ ವಿಮಾನವನ್ನು ಅಪಹರಣಕಾರರು ‘ಮಾನವೀಯ’ ದೃಷ್ಟಿಯಿಂದ ಅಪಹರಿಸಿದ್ದರು ಎಂದು ವೆಬ್‌ಸರಣಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿ, ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆಗೆ ಬಿಜೆಪಿ ಮುಖಂಡರು ನೋಟಿಸ್ ನೀಡಿದ್ದರು.
‘ವಿಮಾನ ಅಪಹರಿಸಿದವರೆಲ್ಲರೂ ಭಯೋತ್ಪಾದಕರಾಗಿದ್ದರು. ಹೀಗಿದ್ದರೂ, ಕೂಡ ವೆಬ್‌ಸರಣಿಯಲ್ಲಿ ಅಪಹರಣಕಾರರು ‘ಮುಸಲ್ಮಾನರು’ ಎಂಬ ಗುರುತನ್ನು ಮರೆಮಾಚಲಾಗಿದೆ. ಚಲನಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ ಅವರು ಕಲಾವಿದರ ಪಾತ್ರಗಳಲ್ಲಿ ಮುಸ್ಲಿಮರೇತರ ಹೆಸರುಗಳನ್ನು ಹೆಚ್ಚಿಸಿ ಆ ಮೂಲಕ ಅವರ ಅಪರಾಧ ಕೃತ್ಯವನ್ನು ಮರೆಮಾಚಿದ್ದಾರೆ’ ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ‘ಎಕ್ಸ್’ ಮೂಲಕ ಪ್ರಶ್ನಿಸಿದ್ದರು.
‘ದಶಕದ ಬಳಿಕವೂ ಐಸಿ–814 ವಿಮಾನವನ್ನು ಹಿಂದೂಗಳೇ ಅಪಹರಿಸಿದ್ದರು ಎಂದು ಜನರು ಭಾವಿಸುತ್ತಾರೆ. ಪಾಕಿಸ್ತಾನದ ಮುಸ್ಲಿಂ ಭಯೋತ್ಪಾದಕರು ನಡೆಸಿದ ಎಲ್ಲ ಕೃತ್ಯಗಳನ್ನು ಎಡಪಂಥೀಯ ನಿಲುವುಗಳು ಸಂಪೂರ್ಣವಾಗಿ ಮುಚ್ಚಿಹಾಕಿದೆ’ ಎಂದು ಕಿಡಿಕಾರಿದ್ದರು.
ಇದರ ಬೆನ್ನಲ್ಲೇ ನೆಟ್‌ಫ್ಲಿಕ್ಸ್‌ನ ಭಾರತ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ಹಾಗೂ ಪ್ರಸಾರ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಭಯೋತ್ಪಾದಕರು ಬಳಸಿದ್ದ ಗುಪ್ತ ಹೆಸರಿನೊಂದಿಗೆ ಅವರ ನೈಜ ಹೆಸರನ್ನು ಪ್ರಸಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.