ADVERTISEMENT

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: ವಾರದಲ್ಲೇ ಇದು ಎರಡನೇ ಘಟನೆ

ಪಿಟಿಐ
Published 22 ಜೂನ್ 2024, 11:21 IST
Last Updated 22 ಜೂನ್ 2024, 11:21 IST
<div class="paragraphs"><p>ಸೇತುವೆ ಕುಸಿತ</p></div>

ಸೇತುವೆ ಕುಸಿತ

   

X/@sanjoychakra

ಸಿವನ್(ಬಿಹಾರ): ಬಾಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ನೂತನ ಸೇತುವೆ ಕುಸಿದು ಬಿದ್ದ ನಾಲ್ಕು ದಿನದ ಬೆನ್ನಲ್ಲೇ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ ಸಂಭವಿಸಿದೆ. ಸಿವಾನ್ ಜಿಲ್ಲೆಯಲ್ಲಿ ಇಂದು ಸೇತುವೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾರಾವುಂಡಾ ಮತ್ತು ಮಹಾರಾಜ್‌ಗಂಜ್ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ಕಾಲುವೆಯೊಂದು ಹರಿಯುತ್ತಿದ್ದು, ಅದಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಇದರಿಂದ ಹಳ್ಳಿಗಳ ನಡುವೆ ಉತ್ತಮ ಸಂಪರ್ಕ ಏರ್ಪಟ್ಟಿತ್ತು. ಇಂದು ಮುಂಜಾನೆ 5 ಗಂಟೆಗೆ ಸುಮಾರಿಗೆ ಈ ಸೇತುವೆ ಕುಸಿದು ಬಿದ್ದಿದೆ.

‘ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಪಿಲ್ಲರ್‌ಗಳು ಕುಸಿದಿವೆ. ಸೇತುವೆ ಪುನರ್ ನಿರ್ಮಾಣ ಮಾಡುವವರೆಗೆ ಎರಡು ಹಳ್ಳಿಗಳಿಗೆ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಮುಕುಲ್ ಕುಮಾರ್ ಗುಪ್ತಾ ಹೇಳಿದರು.

‘1991ರಲ್ಲಿ ಮಹಾರಾಜ್‌ಗಂಜ್‌ನ ಆಗಿನ ಶಾಸಕ ಉಮಾ ಶಂಕರ್ ಸಿಂಗ್ ಅವರು ಈ ಸೇತುವೆ ನಿರ್ಮಾಣ ಮಾಡಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ’ ಎಂದು ದಾರಾವುಂಡಾ ಬಿಡಿಒ ಸೂರ್ಯ ಪ್ರತಾಪ್ ಸಿಂಗ್ ತಿಳಿಸಿದರು.

ಇದಕ್ಕೂ ಮುನ್ನ ಮಂಗಳವಾರ (ಜೂನ್ 18) ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸುಮಾರು 180 ಮೀಟರ್ ಉದ್ದದ ನೂತನ ಸೇತುವೆ ಭಾಗಶಃ ಕುಸಿದು ಬಿದ್ದಿತ್ತು. ಕಳಪೆ ಕಾಮಗಾರಿ ಆರೋಪದ ಮೇಲೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.