ADVERTISEMENT

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ ಪ್ರಕರಣ: 15 ದಿನಗಳಲ್ಲಿ ಏಳು ದುರ್ಘಟನೆ

ಪಿಟಿಐ
Published 3 ಜುಲೈ 2024, 9:21 IST
Last Updated 3 ಜುಲೈ 2024, 9:21 IST
<div class="paragraphs"><p>ಬಿಹಾರದ ಶಿವಾನ್ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಕುಸಿದ ಸೇತುವೆ</p></div>

ಬಿಹಾರದ ಶಿವಾನ್ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ಕುಸಿದ ಸೇತುವೆ

   

ಪಿಟಿಐ ಚಿತ್ರ

ಶಿವಾನ್: ಬಿಹಾರದ ಶಿವಾನ್ ಜಿಲ್ಲೆಯಲ್ಲಿ ಗಂದಕಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬುಧವಾರ ಬೆಳಿಗ್ಗೆ ಕುಸಿಯುವ ಮೂಲಕ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಇಂಥ ದುರ್ಘಟನೆಗಳ ಏಳು ಪ್ರಕರಣಗಳು ದಾಖಲಾಗಿವೆ.

ADVERTISEMENT

ಇದೊಂದು ಕಿರು ಸೇತುವೆಯಾಗಿದೆ. ಮಹರಾಜ್‌ಗಂಜ್‌ನ ಸುತ್ತಮುತ್ತಲಿನ ಹಲವು ಹಳ್ಳಿಗಳು ಇದರೊಂದಿಗೆ ಸಂಪರ್ಕ ಹೊಂದಿವೆ. ಘಟನೆಯಲ್ಲಿ ಸಾವುನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಸಿವಾನ್ ಜಿಲ್ಲೆಯಲ್ಲೇ ಕಳೆದ 11 ದಿನಗಳಲ್ಲಿ ನಡೆದ 2ನೇ ಘಟನೆ ಇದಾಗಿದೆ.

‘ಸೇತುವೆ ಕುಸಿತಕ್ಕೆ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ದೇವೋರಿಯಾ ಬ್ಲಾಕ್‌ನ ಸೇತುವೆ ಗೋಡೆಯೊಂದು ಬುಧವಾರ ಬೆಳಿಗ್ಗೆ ಕುಸಿದಿದೆ. ಇದರ ಕಾರಣವೂ ಗೊತ್ತಾಗಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ನಂತರವಷ್ಟೇ ನಿಖರ ಕಾರಣ ಹೇಳಬಹುದು’ ಎಂದು ಉಪ ಅಭಿವೃದ್ಧಿ ಆಯುಕ್ತ ಮುಖೇಶ್ ಕುಮಾರ್ ಹೇಳಿದ್ದಾರೆ.

‘ಸೇತುವೆಯು ಬುಧವಾರ ಬೆಳಿಗ್ಗೆ 5ಕ್ಕೆ ಕುಸಿದಿದೆ. ಪ್ರಾಥಮಿಕ ಮಾಹಿತಿ ಅನ್ವಯ, ಈ ಸೇತುವೆಯು 1982ರಲ್ಲಿ ನಿರ್ಮಾಣವಾಗಿತ್ತು. ಕಳೆದ ಕೆಲ ದಿನಗಳಿಂದ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿತ್ತು’ ಎಂದಿದ್ದಾರೆ.

ಗ್ರಾಮದ ಸುತ್ತಮುತ್ತ ಸುರಿಯುತ್ತಿರುವ ಹೆಚ್ಚಿನ ಮಳೆಯಿಂದಾಗಿ ಗಂದಕಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು. ಇದರಿಂದಾಗಿ ಸೇತುವೆ ಕುಸಿದಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಜೂನ್ 22ರಂದು ದರೌಂಡಾ ಪ್ರದೇಶದಲ್ಲಿ ಸೇತುವೆ ಕುಸಿದಿತ್ತು. ಇದೇ ರೀತಿಯ ಪ್ರಕರಣಗಳು ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಹಾಗೂ ಕಿಶನ್‌ಗಂಜ್‌ನಲ್ಲೂ ಇತ್ತೀಚೆಗೆ ಸಂಭವಿಸಿವೆ. ಈ ಎಲ್ಲಾ ಘಟನೆಗಳ ಕುರಿತು ತನಿಖೆ ನಡೆಸುವಂತೆ ಉನ್ನತ ಸಮಿತಿಯೊಂದನ್ನು ಸರ್ಕಾರ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.