ನಾಸಿಕ್: ಮಹಾರಾಷ್ಟ್ರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದೆ. ವೇಗವಾಗಿ ಬಂದ ಕಾರೊಂದು 31 ವರ್ಷದ ಮಹಿಳೆಗೆ ಹಿಂದಿನಿಂದ ಗುದ್ದಿದ್ದು, ಅವರು ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ ಅಪಘಾತ ಸಂಭವಿಸಿದ್ದು 51 ವರ್ಷದ ದೇವ್‌ಚಂದ್ ರಾಂಬಾವು ತಿದ್ಮೆ, ಕುಡಿದ ಅಮಲಿನಲ್ಲಿ ಚಾಲನೆ ಮಾಡುತ್ತಿದ್ದ. ಅಪಘಾತವಾದ ತಕ್ಷಣವೇ ದೇವ್‌ಚಂದ್ ಅವರು ಘಟನಾ ಸ್ಥಳದಿಂದ ಓಡಿ ಹೋಗಿ ಮನೆ ಸೇರಿಕೊಂಡಿದ್ದರು. ಅವರನ್ನು ಮನೆಯಿಂದಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ದೇವ್‌ಚಂದ್ ಅವರು ದ್ರುವ್‌ನಗರದ ನಿವಾಸಿ. ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದರು. ಮೃತ ಮಹಿಳೆ ಅರ್ಚನಾ ಕಿಶೋರಿ ಶಿಂದೆ ಅವರು ಹನಮಾನ್ ನಗರ ನಿವಾಸಿಯಾಗಿದ್ದು, ಸಂಜೆ 6 ಗಂಟೆಯ ವೇಳೆಗೆ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತೆಲೆಗೆ ತೀವ್ರ ಗಾಯಗಳಾಗಿದ್ದ ಅರ್ಚನಾ ಅವರನ್ನು ಹತ್ತಿರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ‘ಆಸ್ಪತ್ರೆಗೆ ಕರೆತರುವ ಮೊದಲೇ ಅರ್ಚನಾ ಮೃತಪಟ್ಟಿದ್ದಾರೆ’ ಎಂದು ವೈದ್ಯರು ತಿಳಿಸಿದರು.
ಅಪಘಾತ ನಡೆದದ್ದು ಹೇಗೆ?: ‘ರಸ್ತೆಯಲ್ಲಿ ನಡೆದುಬರುತ್ತಿದ್ದ ಮಹಿಳೆಯತ್ತ ಹಿಂದಿನಿಂದ ಕಾರು ಅತಿವೇಗವಾಗಿ ಬರುತ್ತಿತ್ತು. ಎದುರು ದಿಕ್ಕಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಯುವಕರು ಅದನ್ನು ಕಂಡು, ಕಾರು ಚಾಲಕನನ್ನು ಎಚ್ಚರಿಸಲು ಯತ್ನಿಸಿದ್ದಾರೆ. ಆದರೆ ಕಾರು ಚಾಲಕ ವೇಗವನ್ನು ತಗ್ಗಿಸದೇ ಇರುವ ಕಾರಣ, ಕಾರು ಮಹಿಳೆಗೆ ಗುದ್ದಿಗೆ. ನಂತರ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಪ್ರತ್ಯಕ್ಷ್ಯದರ್ಶಿಗಳು ಕಾರಿನ ನಂಬರ್ ಬರೆದಿಟ್ಟುಕೊಂಡಿದ್ದರು. ಇದರ ಆಧಾರದಲ್ಲಿಯೇ ಪೊಲೀಸರು ದೇವ್‌ಚಂದ್ ಅವರನ್ನು ಪತ್ತೆಹಚ್ಚಿದರು. ದೇವ್‌ಚಂದ್ ಅವರು ಕುಡಿದ ಮತ್ತಿನಲ್ಲಿ ಇದ್ದದ್ದು, ವೈದ್ಯಕೀಯ ವರದಿಯಲ್ಲಿ ಕೂಡ ದೃಢಪಟ್ಟಿದೆ. ದೇವ್‌ಚಂದ್ ಅವರ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 (ಕೊಲೆಯಲ್ಲದ, ಅಜಾಗರೂಕತೆಯಿಂದ ಸಂಭವಸಿದ ಸಾವು), 281 (ವೇಗದ ಚಾಲನೆ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.