ADVERTISEMENT

ಬಿಹಾರ ಚುನಾವಣೆ| ಜೆಡಿಯು ಸೇರಿದ ಆರ್‌ಜೆಡಿ ಶಾಸಕ

ಪಿಟಿಐ
Published 1 ಸೆಪ್ಟೆಂಬರ್ 2020, 13:41 IST
Last Updated 1 ಸೆಪ್ಟೆಂಬರ್ 2020, 13:41 IST
ಆರ್‌ಜೆಡಿ ಶಾಸಕ ಬಿರೇಂದ್ರ ಕುಮಾರ್
ಆರ್‌ಜೆಡಿ ಶಾಸಕ ಬಿರೇಂದ್ರ ಕುಮಾರ್   

ಪಟಣಾ: ಬಿಹಾರದಲ್ಲಿ ಆರ್‌ಜೆಡಿ–ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಆರ್‌ಜೆಡಿಯ ಶಾಸಕ ಬಿರೇಂದ್ರ ಕುಮಾರ್‌ ಅವರು ಮಂಗಳವಾರ ಎನ್‌ಡಿಎ ಮೈತ್ರಿಕೂಟದ ಜೆಡಿಯು ಸೇರಿದ್ದಾರೆ.

ಇದರೊಂದಿಗೆ ಕಳೆದ ಹದಿನೈದು ದಿನಗಳಿಂದ ಈಚೆಗೆ ಆರ್‌ಜೆಡಿಯ 7 ಶಾಸಕರು ಜೆಡಿಯು ಸೇರಿದಂತಾಗಿದೆ.

ಬಿರೇಂದ್ರ ಕುಮಾರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿರುವ ಜೆಡಿಯು ಹಿರಿಯ ನಾಯಕ ಮತ್ತು ಸಂಸದ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಕುಮಾರ್‌ ಆಗಮನದೊಂದಿಗೆ ಜೆಡಿಯುನ ಶಕ್ತಿ ಮತ್ತಷ್ಟು ಹೆಚ್ಚಿದೆ ಎಂದಿದ್ದಾರೆ. ಅಕ್ಟೋಬರ್–ನವೆಂಬರ್‌ನಲ್ಲಿ ಬಿಹಾರದ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ.

ADVERTISEMENT

‘ಬಿಹಾರದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಕೈಗೊಂಡಿರುವ ನಿತೀಶ್‌ ಅವರ ಕಾರ್ಯಗಳನ್ನು ಮೆಚ್ಚಿ ಜೆಡಿಯು ಸೇರುತ್ತಿದ್ದೇನೆ’ ಎಂದು ಟೆಘ್ರಾ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಬಿರೇಂದ್ರ ಕುಮಾರ್‌ ಹೇಳಿದ್ದಾರೆ.

ಕಳೆದ ತಿಂಗಳು ಆರ್‌ಜೆಡಿ ಮೂವರು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿತ್ತು. ಅವರೆಲ್ಲರೂ ಜೆಡಿಯು ಸೇರಿದ್ದರು. ನಂತರ ಲಾಲು ಸಂಬಂಧಿಯೂ ಆಗಿರುವ ಚಂದ್ರಿಕ ರಾಯ್‌ (ರಾಯ್‌ ಪುತ್ರಿ ಮತ್ತು ಲಾಲು ಪುತ್ರ ತೇಜ್‌ಪ್ರತಾಪ್‌ ನಡುವೆ ವೈವಾಹಿಕ ವಿವಾದವಿದೆ) ಸೇರಿದಂತೆ ಮೂವರು ಆರ್‌ಜೆಡಿ ತೊರೆದು ಜೆಡಿಯು ಸೇರ್ಪಡೆಯಾದರು. ಈಗ ಬಿರೇಂದ್ರ ಯಾದವ್‌ ಅವರು ಆರ್‌ಜೆಡಿಯಿಂದ ಹೊರ ಹೋಗಿದ್ದಾರೆ. ಈ ಮೂಲಕ ಚುನಾವಣೆಗೂ ಮೊದಲೇ ಘಟಬಂಧನಕ್ಕೆ ಬಿಹಾರದಲ್ಲಿ ಆಘಾತ ಎದುರಾಗಿದೆ.

ಬಿಹಾರದ ಮಹಾಘಟಬಂಧನದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಸ್‌ಪಿ ಮತ್ತು ಬಾಲಿವುಡ್‌ ಚಿತ್ರ ನಿರ್ಮಾಣ ತಂತ್ರಜ್ಞ ಮುಖೇಶ್ ಸಾಹ್ನಿ ಅವರ ವಿಕಾಶೀಲ ಇನ್ಸಾನ್ ಪಾರ್ಟಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.