ನವದೆಹಲಿ/ಮುಜಫ್ಫರನಗರ: ಪಾಕಿಸ್ತಾನದ ಗಡಿಯಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ಮತ್ತೊಂದು ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿರುವ ಸುಳಿವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ.
‘ಏನೋ ಒಂದು ಮಹತ್ವದ ಘಟನೆ ನಡೆದಿದೆ. ತಕ್ಷಣಕ್ಕೆ ಅದನ್ನು ಬಹಿರಂಗಗೊಳಿಸುವುದಿಲ್ಲ. ಕಾಯ್ದು ನೋಡಿ’ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.
ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿಗೆ ಶನಿವಾರ (ಸೆ. 29ಕ್ಕೆ) ಎರಡು ವರ್ಷಗಳಾದ ಬೆನ್ನಲ್ಲೇ ಸಿಂಗ್ ಅವರ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.
ಮುಜಫ್ಫರ್‌ನಗರದಲ್ಲಿ ಶುಕ್ರವಾರ ಭಗತ್ ಸಿಂಗ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಗಿರುವುದೆಲ್ಲವೂ ಸರಿಯಾಗಿಯೇ ಆಗಿದೆ. ನನ್ನ ಮೇಲೆ ವಿಶ್ವಾಸವಿಡಿ. ಎರಡು, ಮೂರು ದಿನಗಳ ಮೊದಲು ನಿಜಕ್ಕೂ ದೊಡ್ಡ ಘಟನೆ ನಡೆದಿದೆ’ ಎಂದು ಹೇಳಿದ್ದಾರೆ.
ಮತ್ತೊಂದು ಸರ್ಜಿಕಲ್ ಸ್ಟ್ರೈಕ್‌ಗೆ ಈಗ ಕಾಲ ಕೂಡಿ ಬಂದಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಇತ್ತೀಚೆಗೆ ಹೇಳಿದ್ದರು.
ದೃಢಪಡಿಸಿದ ಬಿಎಸ್‌ಎಫ್ ಮೂಲಗಳು: ಮತ್ತೊಂದು ನಿರ್ದಿಷ್ಟ ದಾಳಿ ನಡೆದ ಕುರಿತು ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೂಲಗಳು ಖಚಿತಪಡಿಸಿವೆ.
‘ಪಾಕಿಸ್ತಾನದ ಗಡಿಯಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಭಾರಿ ಆರ್ಟಿಲರಿ ಮತ್ತು ಶೆಲ್ ದಾಳಿ ನಡೆಸಿದೆ. ವೈರಿ ಪಡೆಯಲ್ಲಿ ಸಾಕಷ್ಟು ಸಾವು, ನೋವುಗಳಾಗಿವೆ’ ಎಂದು ಈ ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ ಗಡಿರೇಖೆಯಲ್ಲಿರುವ ಸಾಂಬಾ ಜಿಲ್ಲೆಯಲ್ಲಿ ಸೆ.18ರಂದು ಭಾರತೀಯ ಯೋಧ ನರೇಂದ್ರ ಸಿಂಗ್ ಅವರ ಕತ್ತು ಸೀಳಿ ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
*
ಯೋಧನ ಅಮಾನುಷ ಹತ್ಯೆ ಪ್ರತೀಕಾರಕ್ಕೆ ಸೇನೆ ಸನ್ನದ್ಧವಾಗಿದೆ. ಸರಿಯಾದ ಪಾಠ ಕಲಿಸಲು ಸಮಯಕ್ಕಾಗಿ ಕಾಯುತ್ತಿದ್ದೇವೆ.
-ಕೆ.ಕೆ. ಶರ್ಮಾ, ಬಿಎಸ್‌ಎಫ್ ಮಹಾ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.