ADVERTISEMENT

ತೆರವು ಕಾರ್ಯಾಚರಣೆ: ಶಾಹೀನ್ ಬಾಗ್ ಬಳಿಕ ನ್ಯೂ ಫ್ರೆಂಡ್ಸ್ ಕಾಲೊನಿಗೆ ಬುಲ್ಡೋಜರ್

ಪಿಟಿಐ
Published 10 ಮೇ 2022, 8:59 IST
Last Updated 10 ಮೇ 2022, 8:59 IST
'ನ್ಯೂ ಫ್ರೆಂಡ್ಸ್‌ ಕಾಲೊನಿ'ಯಲ್ಲಿ ತೆರವು ಕಾರ್ಯಾಚರಣೆ (ಪಿಟಿಐ ಚಿತ್ರ)
'ನ್ಯೂ ಫ್ರೆಂಡ್ಸ್‌ ಕಾಲೊನಿ'ಯಲ್ಲಿ ತೆರವು ಕಾರ್ಯಾಚರಣೆ (ಪಿಟಿಐ ಚಿತ್ರ)   

ನವದೆಹಲಿ: ದಕ್ಷಿಣ ದೆಹಲಿ ಮಹಾನಗರ ಪಾಲಿಕೆ (ಎಸ್‌ಡಿಎಂಸಿ) ಅಧಿಕಾರಿಗಳು 'ನ್ಯೂ ಫ್ರೆಂಡ್ಸ್‌ ಕಾಲೊನಿ'ಯಲ್ಲಿರುವಗುರುದ್ವಾರ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಶಾಹೀನ್‌ ಬಾಗ್‌ನಲ್ಲಿ ಸ್ಥಳೀಯರು ಮತ್ತು ರಾಜಕೀಯ ನಾಯಕರು ಸೋಮವಾರ ನಡೆಸಿದ ಪ್ರತಿಭಟನೆ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಇದಾದ ಒಂದು ದಿನದ ನಂತರ, ಅಧಿಕಾರಿಗಳು 'ನ್ಯೂ ಫ್ರೆಂಡ್ಸ್‌ ಕಾಲೊನಿ'ಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಚಾರಣೆಗೆ ಮುಂದಾಗಿದ್ದಾರೆ.

ಎಸ್‌ಡಿಎಂಸಿ ಕೇಂದ್ರ ವಲಯದ ಮುಖ್ಯಸ್ಥ ರಾಜ್‌ಪಾಲ್‌ ಸಿಂಗ್‌ ಅವರು,ನ್ಯೂ ಫ್ರೆಂಡ್ಸ್‌ ಕಾಲೊನಿ ಸುತ್ತಲ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ADVERTISEMENT

'ಪೊಲೀಸರು ಮತ್ತು ಬುಲ್ಡೋಜರ್‌ನಂತಹ ಅಗತ್ಯ ಯಂತ್ರಗಳೊಂದಿಗೆ ತೆರಳಿರುವ ನಮ್ಮ ತಂಡ, 'ನ್ಯೂ ಫ್ರೆಂಡ್ಸ್‌ ಕಾಲೋನಿ'ಯಲ್ಲಿರುವ ಬೌದ್ಧ ಧರ್ಮ ದೇವಾಲಯ, ಗುರುದ್ವಾರ ರಸ್ತೆ ಮತ್ತುಸುತ್ತಲ ಪ್ರದೇಶಗಳಲ್ಲಿ ನಿರ್ಮಿಸಿರುವ ತಾತ್ಕಾಲಿಕ ಕಟ್ಟಡಗಳು, ಮಳಿಗೆಗಳ ತೆರವು ಕಾರ್ಯಾಚರಣೆ ಆರಂಭಿಸಿದೆ. ಅತಿಕ್ರಮಣದ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ' ಎಂದು ತಿಳಿಸಿದ್ದಾರೆ.

ನ್ಯೂ ಫ್ರೆಂಡ್ಸ್‌ ಕಾಲೊನಿಯು ಎಸ್‌ಡಿಎಂಸಿಯ ಕೇಂದ್ರ ವಲಯದ ವ್ಯಾಪ್ತಿಗೆ ಬರುತ್ತದೆ.

ಶಾಹೀನ್ ಬಾಗ್ ಮುಖ್ಯರಸ್ತೆಯಲ್ಲಿ ಸೋಮವಾರ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಂದರ್ಭ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತ ಅವರ ಬೆಂಬಲಿಗರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಖಾನ್ ಮತ್ತು ಇತರರ ವಿರುದ್ಧ ಎಸ್‌ಡಿಎಂಸಿ ಅಧಿಕಾರಿಗಳು ಶಾಹೀನ್ ಬಾಗ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.