ADVERTISEMENT

ಶಾಹೀನ್ ಬಾಗ್ ತೆರವು ಕಾರ್ಯಾಚರಣೆಗೆ ಅಡ್ಡಿ: ಎಎಪಿ ಶಾಸಕ, ಇತರರ ವಿರುದ್ಧ ದೂರು

ಪಿಟಿಐ
Published 9 ಮೇ 2022, 14:47 IST
Last Updated 9 ಮೇ 2022, 14:47 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ದಕ್ಷಿಣ ದೆಹಲಿಯ ಶಾಹೀನ್ ಬಾಗ್ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದಡಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಮತ್ತು ಇತರರ ವಿರುದ್ಧ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್(ಎಸ್‌ಡಿಎಂಸಿ) ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಾಹೀನ್ ಬಾಗ್ ಮುಖ್ಯರಸ್ತೆಯಲ್ಲಿ ಸೋಮವಾರ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಸಂದರ್ಭ ಶಾಸಕ ಅಮಾನತುಲ್ಲಾ ಮತ್ತ ಅವರ ಬೆಂಬಲಿಗರು ಎಸ್‌ಡಿಎಂಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಬಿಡಲಿಲ್ಲ. ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಎಸ್‌ಡಿಎಂಸಿಯ ಕೇಂದ್ರ ವಲಯದ ಅಧಿಕಾರಿ ಶಾಹೀನ್ ಬಾಗ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಶಾಸಕ ಅಮಾನುತುಲ್ಲಾ ಮತ್ತು ಇತರ ನಾಯಕರ ವಿರುದ್ಧ ದೂರು ದಾಖಲಿಸುವಂತೆ ಎಸ್‌ಡಿಎಂಸಿ ಮೇಯರ್ ಮುಖೇಶ್ ಸೂರ್ಯನ್, ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ ಬಳಿಕ ಈ ದೂರು ದಾಖಲಿಸಲಾಗಿದೆ.

ಇಂದು ಬೆಳಗ್ಗೆ ಶಾಹೀನ್ ಬಾಗ್‌ನಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ದಕ್ಷಿಣ ದೆಹಲಿ ಮಹಾನಗರ ಪಾಲಿಕೆ(ಎಸ್‌ಡಿಎಂಸಿ) ಮುಂದಾಗಿತ್ತು. ಈ ಸಂದರ್ಭ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ, ಬುಲ್ಡೋಜರ್ ಜೊತೆ ಬಂದಿದ್ದ ತೆರವು ಕಾರ್ಯಾಚರಣೆ ತಂಡದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ವಾಪಸ್ ಆದರು.

ADVERTISEMENT

ಬಿಜೆಪಿ ಆಡಳಿತವಿರುವ ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್(ಎಸ್‌ಡಿಎಂಸಿ) ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಕೆಲ ಮಹಿಳೆಯರು ಬುಲ್ಡೋಜರ್ ಮುಂದೆ ನಿಂತು ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.