ADVERTISEMENT

1984ರ ಸಿಖ್ ವಿರೋಧಿ ದಂಗೆ: ಟೈಟ್ಲರ್‌ ವಿರುದ್ಧ ದೋಷಾರೋಪ ನಿಗದಿ

ಸಿಬಿಐ ವಿಶೇಷ ನ್ಯಾಯಾಲಯ ಸೂಚನೆ

ಪಿಟಿಐ
Published 13 ಸೆಪ್ಟೆಂಬರ್ 2024, 16:17 IST
Last Updated 13 ಸೆಪ್ಟೆಂಬರ್ 2024, 16:17 IST
ಜಗದೀಶ್‌ ಟೈಟ್ಲರ್‌–ಪಿಟಿಐ ಚಿತ್ರ
ಜಗದೀಶ್‌ ಟೈಟ್ಲರ್‌–ಪಿಟಿಐ ಚಿತ್ರ   

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ಉತ್ತರ ದೆಹಲಿಯ ಪುಲ್ ಬಂಗಶ್ ಪ್ರದೇಶದಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ದೆಹಲಿ ನ್ಯಾಯಾಲಯವು ಕೊಲೆ ಹಾಗೂ ಇತರ ಅಪರಾಧಗಳಿಗೆ ಸಂಬಂಧಿಸಿ ಶುಕ್ರವಾರ ದೋಷಾರೋಪ ನಿಗದಿ ಮಾಡಿದೆ.

‘ಈ ಪ್ರಕರಣಗಳಲ್ಲಿ ನಾನು ನಿರಪರಾಧಿ’ ಎಂಬುದಾಗಿ ಟೈಟ್ಲರ್‌ ಅವರು ನ್ಯಾಯಾಲಯಕ್ಕೆ ನಿವೇದನೆ ಮಾಡಿದರು. ಆಗ, ವಿಚಾರಣೆ ಎದುರಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್‌ ಸಿಯಾಲ್‌ ಅವರು ಟೈಟ್ಲರ್‌ ಅವರಿಗೆ ನಿರ್ದೇಶನ ನೀಡಿದರು.

ಕೊಲೆ ಅಲ್ಲದೇ, ಕಾನೂನುಬಾಹಿರವಾಗಿ ಗುಂಪು ಸೇರಿದ್ದು, ಗಲಭೆಗೆ ಪ್ರಚೋದನೆ, ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕಿದ್ದು ಮತ್ತು ಅಕ್ರಮ ಪ್ರವೇಶ ಹಾಗೂ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಆರೋಪ ನಿಗದಿಪಡಿಸುವಂತೆ ನ್ಯಾಯಾಲಯ ಆದೇಶಿಸಿತು.

ADVERTISEMENT

‘ಅರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ಆ.30ರಂದು ನ್ಯಾಯಾಧೀಶರು ತಿಳಿಸಿದ್ದರು.

‘ಟೈಟ್ಲರ್‌ ಅವರು 1984ರ ನವೆಂಬರ್‌ 1ರಂದು ಬಿಳಿ ಬಣ್ಣದ ಅಂಬಾಸಿಡರ್‌ ಕಾರಿನಲ್ಲಿ ಪುಲ್‌ ಬಂಗಶ್‌ ಗುರುದ್ವಾರದ ಬಳಿ ಬಂದಿದ್ದರು. ಕಾರಿನಿಂದ ಇಳಿದ ಅವರು ‘ಸಿಖ್ಖರನ್ನು ಕೊಲ್ಲಿರಿ, ಅವರು ನಮ್ಮ ತಾಯಿಯನ್ನು ಕೊಂದಿದ್ದಾರೆ’ ಎಂದು ಹೇಳುವ ಮೂಲಕ ಅಲ್ಲಿದ್ದ ಗುಂಪನ್ನು ಪ್ರಚೋದಿಸಿದ್ದರು. ಬಳಿಕ ಅಲ್ಲಿ ನಡೆದ ಗಲಭೆಯಲ್ಲಿ ಮೂವರನ್ನು ಹತ್ಯೆ ಮಾಡಲಾಯಿತು’ ಎಂದು ಸಾಕ್ಷಿಯೊಬ್ಬರ ಹೇಳಿಕೆಯನ್ನು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.