ADVERTISEMENT

ಹುಲಿ ಬೇಟೆ ತಡೆ ಕಾರ್ಯಾಚರಣೆ: ಮಾಹಿತಿ ಒದಗಿಸದ ರಾಜ್ಯ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:06 IST
Last Updated 1 ಮಾರ್ಚ್ 2023, 4:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶನ ನೀಡಿದ ಬಳಿಕವೂ ಹುಲಿ ಹಾಗೂ ಇತರ ಕಾಡು ಪ್ರಾಣಿಗಳ ಕಳ್ಳ ಬೇಟೆ ತಡೆ ಕಾರ್ಯಾಚರಣೆಯ ಕುರಿತು ಕರ್ನಾಟಕ ಸರ್ಕಾರ ವರದಿ ಸಲ್ಲಿಸಿಲ್ಲ.

ಕಾರ್ಯಾಚರಣೆ ಕುರಿತು ಕೇರಳ, ಮಧ್ಯ ಪ್ರದೇಶ ಅರಣ್ಯ ಇಲಾಖೆಗಳಷ್ಟೇ ಮಾಹಿತಿ ಒದಗಿಸಿವೆ. ವನ್ಯಜೀವಿ ಧಾಮಗಳಲ್ಲಿ ವಶಪಡಿಸಿಕೊಂಡ ಬಲೆಗಳು ಹಾಗೂ ವಿದ್ಯುತ್‌ ವೈರ್‌ಗಳ ವಿವರಗಳನ್ನು ನೀಡಿವೆ. ಈ ಸಂಬಂಧ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆಯಲಾಗಿದೆ.

ಹುಲಿ ಸಂರಕ್ಷಿತ ಧಾಮಗಳು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಹಾಗೂ ಬಲೆ ಹಾಕಿ ಹುಲಿ ಹಾಗೂ ಇತರ ವನ್ಯಜೀವಿಗಳ‌ನ್ನು ಕೊಲ್ಲುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಹೀಗಾಗಿ, ಅವುಗಳ ಕಳ್ಳ ಬೇಟೆ ನಿಯಂತ್ರಣಕ್ಕೆ ಜನವರಿ ಮೂರನೇ ವಾರದಲ್ಲಿ ಕಾರ್ಯಾಚರಣೆ ನಡೆಸಬೇಕು. ಜತೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮೂರು ತಿಂಗಳಿಗೊಮ್ಮೆ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಎನ್‌ಟಿಸಿಎ ಉಪ ಮಹಾನಿರ್ದೇಶಕ ರಾಜೇಂದ್ರ ಜಿ.ಗರವಾಡ ಅವರು ಎಲ್ಲ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರಿಗೆ 2022ರ ಜನವರಿ 14ರಂದು ಪತ್ರ ಬರೆದಿದ್ದರು. ಆದರೆ, ಈವರೆಗೆ ಬಹುತೇಕ ರಾಜ್ಯಗಳು ಮಾಹಿತಿ ನೀಡಿಲ್ಲ.

ADVERTISEMENT

ಕರ್ನಾಟಕದಲ್ಲಿ ಫೆಬ್ರುವರಿಯಲ್ಲಿ ಎರಡು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯ ವ್ಯಾಪ್ತಿಯ ಮಲ್ಲಯ್ಯನಕಟ್ಟೆ ಕೆರೆಯಲ್ಲಿ ಇದೇ 7ರಂದು ಹುಲಿಯ ಮೃತದೇಹ ಪತ್ತೆಯಾಗಿತ್ತು. ಹುಲಿಯು ಜಮೀನಿನಲ್ಲಿ ಅಳವಡಿಸಿದ್ದ ವಿದ್ಯುತ್‌ ತಂತಿ ಬೇಲಿ ಸ್ಪರ್ಶಿಸಿ ಮೃತಪಟ್ಟಿರುವುದು ಖಚಿತವಾಗಿತ್ತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಂಚಲದೊರೆ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹುಲಿ ಕಳೇಬರ ಇತ್ತೀಚೆಗೆ ಪತ್ತೆಯಾಗಿತ್ತು. ಆದರೆ, ಹುಲಿಯ ಸಾವಿಗೆ ಕಾರಣವೇನು ಎಂಬುದನ್ನು ಅರಣ್ಯ ಇಲಾಖೆ ಈ ತನಕ ಪತ್ತೆ ಹಚ್ಚಿಲ್ಲ.

ಹುಲಿಗಳ ಸಾವು– ರಾಜ್ಯಕ್ಕೆ ಮೂರನೇ ಸ್ಥಾನ: 2012ರಿಂದ ಇಲ್ಲಿಯವರೆಗೆ ದೇಶದಲ್ಲಿ 1,062 ಹುಲಿಗಳು ಮೃತಪಟ್ಟಿವೆ. ಇದರಲ್ಲಿ ಸಹಜ ಸಾವಿನ ಪ್ರಕರಣಗಳು ಸೇರಿವೆ. ಶೇ 53ರಷ್ಟು ಹುಲಿಗಳು ಸಂರಕ್ಷಿತ ಧಾಮದಲ್ಲಿ ಮೃತಪಟ್ಟಿವೆ. ಶೇ 35.22ರಷ್ಟು ಹುಲಿಗಳು ಸಂರಕ್ಷಿತ ಧಾಮದ ಹೊರಗೆ ಸತ್ತಿವೆ. ಶೇ 11.58ರಷ್ಟು ಹುಲಿಗಳ ಕಳೇಬರಗಳನ್ನು ಅರಣ್ಯ ಇಲಾಖೆಗಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಕಳೆದೊಂದು ದಶಕದಲ್ಲಿ ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಹುಲಿಗಳು (270) ಸತ್ತಿವೆ. ಮಹಾರಾಷ್ಟ್ರ (184) ಹಾಗೂ ಕರ್ನಾಟಕ (150) ನಂತರದ ಸ್ಥಾನದಲ್ಲಿವೆ. ಅಭಯಾರಣ್ಯಗಳ ಪೈಕಿ ನಾಗರಹೊಳೆ (51) ಹಾಗೂ ಬಂಡೀಪುರ (49) ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಬಿಆರ್‌ಟಿಯಲ್ಲಿ 10 ಹಾಗೂ ಭದ್ರಾ ಅಭಯಾರಣ್ಯ ದಲ್ಲಿ 6 ಹುಲಿಗಳು ಮೃತಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.