ಮುಂಬೈ: ‘ಚರ್ಚೆಗೆ ಯಾರೂ ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಗಡುಕರು ಆಳುತ್ತಾರೆ ಮತ್ತು ಹಿಂಸೆಯೇ ಜೀವನಶೈಲಿಯಾಗುತ್ತದೆ’. ಇದು ತಮ್ಮ ಪಾಲಕರು ಮತ್ತು ಪುತ್ರಿಗೆ ಬಂದ ಬೆದರಿಕೆ ಕರೆಗಳ ಕುರಿತು ಬಾಲಿವುಡ್ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪ್ರತಿಕ್ರಿಯೆ.
ಬೆದರಿಕೆ ಕರೆಗಳು ಬರುತ್ತಿರುವ ಕಾರಣಕ್ಕೆ ಟ್ವಿಟರ್ ಖಾತೆ ಅಳಿಸಿಹಾಕುತ್ತಿರುವುದಾಗಿ ಅವರು ಘೋಷಿಸಿದ್ದಾರೆ. ಜತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸದೇ ಇರುವ ಬಗ್ಗೆ ಕೊನೆಯ ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡುವುದು ಮತ್ತು ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದವರ ಮೇಲೆ ದಾಳಿ ನಡೆಸುವುದನ್ನು ಖಂಡಿಸಿ ಬುದ್ಧಿಜೀವಿಗಳು ಮತ್ತು ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜುಲೈ 23ರಂದು ಬರೆದಿದ್ದ ಬಹಿರಂಗ ಪತ್ರಕ್ಕೆ ಸಹಿ ಮಾಡಿದವರಲ್ಲಿ ಅನುರಾಗ್ ಒಬ್ಬರಾಗಿದ್ದರು.
‘ಸಾಮಾಜಿಕ ಮಾಧ್ಯಮದಲ್ಲಿ ಸ್ವತಂತ್ರವಾಗಿ ಅಭಿಪ್ರಾಯ ಹಂಚಿಕೊಳ್ಳಲು ಆಗದ ಸ್ಥಿತಿ ಇದೆ ಎಂದಾದರೆ ನಾನು ಆ ಮಾಧ್ಯಮದಲ್ಲಿ ಇರಲು ಬಯಸುವುದಿಲ್ಲ.’ ಎಂದು ಅವರು ಹೇಳಿದ್ದಾರೆ.
‘ನಿಮ್ಮ ಪಾಲಕರಿಗೆ ಬೆದರಿಕೆ ಕರೆಗಳು ಬರಲು ಆರಂಭವಾದಾಗ, ಮಗಳಿಗೆ ಆನ್‌ಲೈನ್‌ನಲ್ಲಿ ಬೆದರಿಕೆ ಬಂದಾಗ ಚರ್ಚೆಗೆ ಯಾರೂ ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಗಡುಕರು ಆಳುತ್ತಾರೆ ಮತ್ತು ಹಿಂಸೆಯೇ ಜೀವನಶೈಲಿಯಾಗುತ್ತದೆ. ಈ ‘ಹೊಸ ಭಾರತ’ದಲ್ಲಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ನನ್ನ ಕೊನೆಯ ಟ್ವೀಟ್. ಸ್ವತಂತ್ರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲ ಎಂದಮೇಲೆ ನಾನು ಮಾತನಾಡದೇ ಇರಲು ತೀರ್ಮಾನಿಸುವೆ. ನಾನು ಈ ವೇದಿಕೆಯಿಂದ ಹೊರನಡೆಯುತ್ತಿದ್ದೇನೆ’ ಎಂದು ಅನುರಾಗ್ ಕೊನೆಯ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಅನುರಾಗ್ ನಿರ್ದೇಶನದ ‘ಸೇಕ್ರೆಡ್ ಗೇಮ್ಸ್–2’ ವೆಬ್ ಸರಣಿಬಿಡುಗಡೆಯ ಹಂತದಲ್ಲಿದ್ದು, ಪ್ರಸಕ್ತ ಹೊಸ ಚಿತ್ರವೊಂದರ ನಿರ್ದೇಶನದಲ್ಲಿ ಅವರು ನಿರತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.