ADVERTISEMENT

ಮಹಾಘಟಬಂಧನ್‌ ಜನವಿರೋಧಿ ಕೂಟ: ಪ್ರಧಾನಿ ಮೋದಿ ಕಿಡಿ

ಪಿಟಿಐ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST
ದಾದ್ರಾ ನಗರ ಹವೇಲಿಯ ಹಜಿರಾದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಲಾರ್ಸೆನ್‌ ಆ್ಯಂಡ್‌ ಟುರ್ಬೊ ನಿರ್ಮಿಸಿದ ‘ಕೆ9 ವಜ್ರ’ ಹೌವಿಟ್ಜರ್‌ ಯುದ್ಧ ಟ್ಯಾಂಕ್‌ ಏರಿದರು. ಭಾರತೀಯ ಸೇನೆಗೆ ಬೇಕಾದ ಯುದ್ಧ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿದ ದೇಶದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆ ಪಡೆದ ಎಲ್‌&ಟಿ ಶಸ್ತಾಸ್ತ್ರ ಘಟಕವನ್ನು ಪ್ರಧಾನಿ ಇದೇ ವೇಳೆ ಲೋಕಾರ್ಪಣೆ ಮಾಡಿದರು –ಪಿಟಿಐ
ದಾದ್ರಾ ನಗರ ಹವೇಲಿಯ ಹಜಿರಾದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಲಾರ್ಸೆನ್‌ ಆ್ಯಂಡ್‌ ಟುರ್ಬೊ ನಿರ್ಮಿಸಿದ ‘ಕೆ9 ವಜ್ರ’ ಹೌವಿಟ್ಜರ್‌ ಯುದ್ಧ ಟ್ಯಾಂಕ್‌ ಏರಿದರು. ಭಾರತೀಯ ಸೇನೆಗೆ ಬೇಕಾದ ಯುದ್ಧ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿದ ದೇಶದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆ ಪಡೆದ ಎಲ್‌&ಟಿ ಶಸ್ತಾಸ್ತ್ರ ಘಟಕವನ್ನು ಪ್ರಧಾನಿ ಇದೇ ವೇಳೆ ಲೋಕಾರ್ಪಣೆ ಮಾಡಿದರು –ಪಿಟಿಐ   

ಸಿಲ್ವಾಸಾ/ದಾದ್ರಾ ಮತ್ತು ನಗರ ಹವೇಲಿ: ವಿಪಕ್ಷಗಳ ನಾಯಕರ ಮಹಾಘಟಬಂಧನ್‌ ಕೇವಲ ಮೋದಿ ವಿರೋಧಿ ಕೂಟವಲ್ಲ, ಅದೊಂದು ಸಮಯಸಾಧಕರ ಜನವಿರೋಧಿ ಕೂಟ ಎಂದು ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿಯಲ್ಲಿ ಶನಿವಾರ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನ್‌ ನಾಯಕರು ಸ್ವಾರ್ಥಿಗಳು. ಅಧಿಕಾರ ಮತ್ತು ಅಸ್ತಿತ್ವಕ್ಕಾಗಿ ಒಂದಾಗಿದ್ದಾರೆ ಎಂದು ಹೇಳಿದರು.

ಅಧಿಕಾರದ ಹಗಲುಗನಸು ಕಾಣುತ್ತಿರುವ ವಿಪಕ್ಷ ನಾಯಕರು ಈಗಾಗಲೇ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ADVERTISEMENT

ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಹಣ ಲೂಟಿ ಮಾಡದಂತೆ ಕಡಿವಾಣ ಹಾಕಿದ್ದರಿಂದ ಸಹಜವಾಗಿ ತಮ್ಮ ವಿರುದ್ಧ ಹಲ್ಲು ಮಸಿಯುತ್ತಿರುವ ನಾಯಕರೆಲ್ಲ ಸೇರಿ ಮಹಾಘಟಬಂಧನ್‌ ರಚಿಸಿಕೊಂಡಿದ್ದಾರೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಒಬ್ಬ ಶಾಸಕನನ್ನು ಮಾತ್ರ ಹೊಂದಿದೆ. ಆದರೂ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ವಿಪಕ್ಷಗಳು ಅಸ್ತಿತ್ವಕ್ಕಾಗಿ ಬೊಬ್ಬೆ ಹೊಡೆಯುತ್ತಿವೆ. ಬಿಜೆಪಿ ಆ ಮಟ್ಟಿಗೆ ಅವರ ನಿದ್ರೆಗೆಡಸಿದೆ ಎಂದು ಮೋದಿ ಲೇವಡಿ ಮಾಡಿದರು.

ಘಟಬಂಧನ್‌ ನಾಯಕ ಯಾರು?

ಮಹಾಘಟಬಂಧನ್‌ಗೆ ನಾಯಕ ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.

ಕೋಲ್ಕತ್ತದಲ್ಲಿ ನಡೆದ ರ‍್ಯಾಲಿ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ರಾಜಕೀಯ ಕಸರತ್ತು. ಸ್ವಹಿತಾಸಕ್ತಿ ಮತ್ತು ವಿರೋಧಾಭಾಸ ಸೈದ್ಧಾಂತಿಕ ನಿಲುವು ಹೊಂದಿರುವ ಪಕ್ಷಗಳ ಕೂಟ ಎಂದು ಬಣ್ಣಿಸಿದೆ.

ಮಹಾಘಟಬಂಧನ್‌ದಿಂದ ಬಿಜೆಪಿಗೆ ಯಾವುದೇ ಭಯ ಇಲ್ಲ. ಮುಂದಿನ ಬಾರಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಬಿಜೆಪಿ ವಕ್ತಾರ ರಾಜೀವ್‌ ಪ್ರತಾಪ್‌ ರೂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಹಾಘಟಬಂಧನ್‌ದಲ್ಲಿರುವ ವಿವಿಧ ಪಕ್ಷದ ನಾಯಕರಲ್ಲಿಯೇ ಒಮ್ಮತವಿಲ್ಲ. ಪರಸ್ಪರ ಕಾಲೆಳೆಯುತ್ತಿದ್ದಾರೆ. ಕೆಲವರು ನಕ್ಸಲೀಯರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ರಾಷ್ಟ್ರ ವಿರೋಧಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದರು.

ಶತ್ರುಘ್ನ ಸಮಯಸಾಧಕ

ಪ್ರಧಾನಿ ಮೋದಿ ವಿರೋಧಿ ರ‍್ಯಾಲಿಯಲ್ಲಿ ಭಾಗವಹಿಸಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರೊಬ್ಬ ‘ಸಮಯಸಾಧಕ’. ಅವರ ವಿರುದ್ಧ ಪಕ್ಷ ಶಿಸ್ತುಕ್ರಮತೆಗೆದುಕೊಳ್ಳಲಿದೆ ಎಂದರು.

ಒಂದು ಕಡೆ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಿಂದ ಪಕ್ಷ ನೀಡುವ ವಿಪ್‌ ಪಾಲಿಸುವ ಶತ್ರಘ್ನ ಮತ್ತೊಂದು ಕಡೆ ವಿರೋಧಿಗಳ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಎರಡೂ ಕಡೆ ರಾಜಕೀಯ ಲಾಭ ಪಡೆಯುವ ಸಮಯ ಸಾಧಕತನವಲ್ಲದೇ ಮತ್ತೇನು ಎಂದು ರೂಡಿಪ್ರಶ್ನಿಸಿದ್ದಾರೆ.

ನಾಯಕರಿಲ್ಲ, ಬರೀ ಡೀಲರ್‌ಗಳು

‘ಬಿಜೆಪಿಗೆ ನರೇಂದ್ರ ಮೋದಿ ಅವರ ನಾಯಕತ್ವವಿದೆ. ಆದರೆ, ಮಹಾಘಟಬಂಧನ್‌ದಲ್ಲಿ ಯಾರೂ ಲೀಡರ್‌ಗಳಿಲ್ಲ. ಬರೀ ಡೀಲರ್‌ಗಳಿದ್ದಾರೆ’ ಎಂದು ಬಿಜೆಪಿ ನಾಯಕ ಶಾನವಾಜ್‌ ಹುಸೇನ್‌ ಲೇವಡಿ ಮಾಡಿದ್ದಾರೆ.

‘ಮೋದಿ ಬಿಜೆಪಿಯ ಶಕ್ತಿಯಾದರೆ, ರಾಹುಲ್‌ ಗಾಂಧಿ ವಿರೋಧ ಪಕ್ಷಗಳ ದೌರ್ಬಲ್ಯ’ ಎಂದರು. ರ‍್ಯಾಲಿ ನಡೆದ ಪಶ್ಚಿಮ ಬಂಗಾಳದಲ್ಲಿಯೇ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಅವರು ಸವಾಲು ಹಾಕಿದರು.

*****

ಮಹಾಘಟಬಂಧನ್‌ ಅಧಿಕಾರ ಲಾಲಸೆಗಾಗಿ ರಚಿಸಿಕೊಂಡಿರುವ ತಾತ್ಕಾಲಿಕ ನಕಲಿ ರಾಜಕೀಯ ಕೂಟ. ಅಲ್ಲಿರುವ ಎಲ್ಲ ನಾಯಕರೂ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ.

– ಸೈಯದ್‌ ಶಾನವಾಜ್‌ ಹುಸೇನ್‌, ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.