ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ಜೈಲಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗರು ಯಾರನ್ನಾದರೂ ಕೊಲ್ಲುವ ಮಟ್ಟಕ್ಕೆ ಇಳಿಯಬಹುದು’ ಎಂದು ಆರೋಪಿಸಿದ್ದಾರೆ. ಆದರೆ, ಸಿಂಗ್ ಆರೋಪದ ಬಗ್ಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಕೇಜ್ರಿವಾಲ್ ಅವರ ಅನಾರೋಗ್ಯದ ಬಗ್ಗೆ ಗೇಲಿ ಮಾಡಿದ್ದಕ್ಕಾಗಿ ಬಿಜೆಪಿ ನಾಯಕರನ್ನು ಸಂಜಯ್ ಸಿಂಗ್ ತರಾಟೆಗೆ ತೆಗೆದುಕೊಂಡರು. ಜತೆಗೆ, ಕೇಜ್ರಿವಾಲ್ ಅವರ ಬಗ್ಗೆ ದಾರಿ ತಪ್ಪಿಸುವಂತಹ ಸುದ್ದಿಯನ್ನು ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ’ ಎಂದೂ ವಾಗ್ದಾಳಿ ನಡೆಸಿದ್ದಾರೆ.
‘ಜೈಲಿನ ನಿಯಮಗಳ ಪ್ರಕಾರ ಕೈದಿಗಳ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ. ಆದರೆ, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ಮಾಧ್ಯಮಗಳಲ್ಲಿ ಕೇಜ್ರಿವಾಲ್ ಅವರ ನಕಲಿ ಆಹಾರ ಪಟ್ಟಿಯನ್ನು ಹಂಚಿಕೊಂಡಿರುವುದು ಎಷ್ಟು ಸರಿ’ ಎಂದು ಸಿಂಗ್ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಅವರಿಗೆ ಮನೆಯೂಟ ಹಾಗೂ ಇನ್ಸುಲಿನ್ ನಿರಾಕರಿಸುವ ಮೂಲಕ ಕೊಲ್ಲುವ ಸಂಚು ನಡೆದಿದೆ ಎಂದು ದೆಹಲಿ ಸಚಿವೆ ಅತಿಶಿ ಗುರುವಾರ ಆರೋಪಿಸಿದ್ದರು. ಆದರೆ, ಜೈಲು ಅಧಿಕಾರಿಗಳು ಅತಿಶಿ ಆರೋಪವನ್ನು ತಳ್ಳಿಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.