ಅಮರಾವತಿ: ತಿರುಪತಿ ದೇವಸ್ಥಾನದ ಪ್ರಸಾದ ‘ಲಡ್ಡು’ ಈಗ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಆಹಾರವಾಗಿದೆ.
‘ತಿರುಮಲ ದೇವಸ್ಥಾನದ ಪ್ರಸಾದ ‘ಲಡ್ಡು‘ ತಯಾರಿಸಲು, ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು’ ಎಂದು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿಕೆಗೆ, ಪ್ರತಿಪಕ್ಷಗಳು ತೀವ್ರ ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸಿವೆ.
ಮುಖ್ಯಮಂತ್ರಿಯವರ ಹೇಳಿಕೆ ವಿವಾದಕ್ಕೀಡಾದಂತೆ ಅದರ ಸಮರ್ಥನೆಯಾಗಿ ಗುಜರಾತ್ ಮೂಲದ ಜಾನುವಾರು ಪ್ರಯೋಗಾಲಯ ಎನ್‌ಡಿಡಿಬಿ ಕಾಫ್ ಲಿಮಿಟೆಡ್‌ನ ವರದಿಯನ್ನು ತೆಲುಗುದೇಶಂ ಪಕ್ಷವು ಬಿಡುಗಡೆ ಮಾಡಿದೆ.
ಲಡ್ಡುವನ್ನು ತಯಾರಿಸಲು ಬಳಸಿದ್ದ ತುಪ್ಪದ ಮಾದರಿಯಲ್ಲಿ ಗೋಮಾಂಸದ ಚರ್ಬಿಯ ಅಂಶವು ಪತ್ತೆಯಾಗಿದೆ ಎಂದು ದೃಢಪಡಿಸುವ ಪ್ರಯೋಗಾಲಯ ವರದಿಯನ್ನು ತೆಲುಗುದೇಶಂ ಪಕ್ಷದ ವಕ್ತಾರ ಅನಂ ವೆಂಕಟರಮಣ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಈ ವರದಿಯ ಪ್ರಕಾರ, ತುಪ್ಪದ ಮಾದರಿಯಲ್ಲಿ ಮೀನಿನ ಎಣ್ಣೆ, ಗೋಮಾಂಸದ ಚರ್ಬಿ, ಹಂದಿಯ ಕೊಬ್ಬಿನ ಅಂಶಗಳು ಇರುವುದು ಪತ್ತೆಯಾಗಿದೆ. 2024ರ ಜುಲೈ 9ರಂದು ತುಪ್ಪದ ಮಾದರಿಯನ್ನು ಪಡೆಯಲಾಗಿತ್ತು. ಪ್ರಯೋಗಾಲಯದ ವರದಿಯು ಜುಲೈ 16ರಂದು ಬಂದಿದೆ.
ಆದರೆ, ಆಂಧ್ರಪ್ರದೇಶದ ಸರ್ಕಾರ ಅಥವಾ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕೃತವಾಗಿ ಈ ವರದಿಯನ್ನು ದೃಢಪಡಿಸಿಲ್ಲ. ಗುಜರಾತ್‌ನಲ್ಲಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯಲ್ಲಿ ಈ ಪ್ರಯೋಗಾಲಯವಿದೆ.
ಬುಧವಾರ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಮಾತನಾಡಿದ್ದ ಮುಖ್ಯಮಂತ್ರಿ, ‘ನಮ್ಮ ಸರ್ಕಾರ ಬಂದ ಮೇಲೆ ಶುದ್ಧ ತುಪ್ಪವನ್ನೇ ಬಳಸಲಾಗುತ್ತಿದೆ. ಪ್ರಸಾದದ ಗುಣಮಟ್ಟ ವೃದ್ಧಿಸಲು ತಯಾರಿಕೆಯ ಸ್ಥಳವನ್ನು ಶುದ್ದೀಕರಿಸಲಾಗಿದೆ’ ಎಂದೂ ಹೇಳಿದ್ದರು.
ತಿರುಪತಿ ದೇಗುಲ ನಮಗೆ ಭಕ್ತಿಭಾವದ ತಾಣ. ಹಿಂದಿನ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ತಿಳಿದು ದಿಗ್ಭ್ರಮೆಯಾಗಿದೆ.–ನಾರಾ ಲೋಕೇಶ್, ಮಾಹಿತಿ ತಂತ್ರಜ್ಞಾನ ಸಚಿವ
ಸಿ.ಎಂ ಹೇಳಿಕೆ ತುಂಬಾ ಗಂಭೀರವಾದ ವಿಚಾರ. ಹಿಂದಿನ ವೈಎಸ್‌ಆರ್ ಸರ್ಕಾರದ ಹಿಂದೂ ವಿರೋಧಿ ಕೃತ್ಯಗಳು ಎಲ್ಲರಿಗೂ ಗೊತ್ತಿರುವಂತಹದ್ದೆ. ಈ ಕೃತ್ಯದಲ್ಲಿ ತೊಡಗಿದ್ದವರ ಮೇಲೆ ಸರ್ಕಾರ ಕಠಿಣ ಕ್ರಮಜರುಗಿಸಬೇಕು.–ವಿನೋದ್ ಬನ್ಸಾಲ್, ರಾಷ್ಟ್ರೀಯ ವಕ್ತಾರ ವಿಎಚ್‌ಪಿ
ರಾಜಕೀಯ ಲಾಭಕ್ಕಾಗಿ ಆರೋಪ –ವೈಎಸ್‌ಆರ್‌ಸಿಪಿ
‘ಇದು ದುರುದ್ದೇಶದ ಆರೋಪ. ರಾಜಕೀಯ ಲಾಭಕ್ಕಾಗಿ ಟಿಡಿಪಿ ಮುಖ್ಯಸ್ಥರೂ ಆದ ಮುಖ್ಯಮಂತ್ರಿ ಯಾವ ಮಟ್ಟಕ್ಕೂ ಇಳಿಯಬಲ್ಲರು’ ಎಂದು ವೈಎಸ್‌ಆರ್‌ಸಿಪಿ ನಾಯಕ ಟಿಟಿಡಿಯ ಮಾಜಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅವರು ತಿರುಗೇಟು ನೀಡಿದ್ದಾರೆ.
ಎರಡು ಅವಧಿಗೆ ಟಿಟಿಡಿ ಅಧ್ಯಕ್ಷರಾಗಿದ್ದರಾಜ್ಯಸಭೆ ಸದಸ್ಯರಾದ ಸುಬ್ಬಾರೆಡ್ಡಿ ‘ಇಂತಹ ಆರೋಪದ ಮೂಲಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದ್ದಾರೆ. ಈ ಹೇಳಿಕೆಯಿಂದ ದೇವಸ್ಥಾನದ ಕೋಟ್ಯಂತರ ಭಕ್ತರಿಗೂ ನೋವುಂಟು ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿಯವರ ಹೇಳಿಕೆ ದುರುದ್ದೇಶದಿಂದ ಕೂಡಿದೆ. ಯಾವುದೇ ವ್ಯಕ್ತಿ ಇಂತಹ ಪದಗಳನ್ನು ಬಳಸಲು ಅಥವಾ ಹೀಗೆ ಆರೋಪ ಮಾಡಲು ಬಯಸುವುದಿಲ್ಲ’ ಎಂದಿದ್ದಾರೆ.
ದುರುದ್ದೇಶದ ಹೇಳಿಕೆ ಸಿ.ಎಂಗೆ ದೇವರೇ ಶಿಕ್ಷಿಸಲಿದೆ–ಮಾಜಿ ಅಧ್ಯಕ್ಷ
ಅಮರಾವತಿ: ‘ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಎನ್.ಚಂದ್ರಬಾಬುನಾಯ್ಡು ಇಂತಹ ಹೇಳಿಕೆ ನೀಡಿರುವುದು ಶೋಚನೀಯ. ದುರುದ್ದೇಶದ ಇಂತಹ ಕೃತ್ಯದಲ್ಲಿ ಯಾರಾದರೂ ತೊಡಗಿದಲ್ಲಿ ಅಂತಹವರನ್ನು ಮಹಾ ವಿಷ್ಣು ನಾಶಪಡಿಸುತ್ತಾರೆ’ ಎಂದು ವೈಎಸ್‌ಆರ್‌ಸಿಪಿ ಹಿರಿಯ ಮುಖಂಡ ಬಿ.ಕರುಣಾಕರ ರೆಡ್ಡಿ ಟೀಕಿಸಿದ್ದಾರೆ.
ಎರಡು ಅವಧಿಗೆ ಟಿಟಿಡಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಕರುಣಾಕರ ರೆಡ್ಡಿ ‘ಸಿ.ಎಂ ನಾಯ್ಡು ಮತ್ತು ಅವರ ಕುಟುಂಬ ಸದಸ್ಯರಿಗೆ ತಿರುಪತಿಯ ದೇವರೇ ಶಿಕ್ಷೆ ನೀಡಲಿದೆ. ಈ ಅರೋಪ ಅಸಮರ್ಥನೀಯ ದುರುದ್ದೇಶದಿಂದ ಕೂಡಿದ್ದು ಹಾಗೂ ದೇವಸ್ಥಾನಕ್ಕೆ ಎಸಗಿದ ಅಪಚಾರವಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಹಾಗೂ ಪ್ರತಿಪಕ್ಷವನ್ನು ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ಹೀಗೆ ಆರೋಪ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.