ಅಮರಾವತಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರಪ್ರದೇಶ ಸರ್ಕಾರವು 2007ರಲ್ಲಿ ಕಾಕಿನಾಡ ವಿಶೇಷ ಆರ್ಥಿಕ ವಲಯ (ಕೆಎಸ್‌ಇಝೆಡ್)ಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದ 2,180 ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲುಗುರುವಾರ ಆದೇಶ ಹೊರಡಿಸಿದೆ,
ತಮ್ಮ ಭೂಮಿಯ ಸ್ವಾಧೀನವನ್ನು ವಿರೋಧಿಸಿದ್ದ ರೈತರು ಪರಿಹಾರ ಪಡೆಯಲು ನಿರಾಕರಿಸಿದ್ದರು. ಭೂಮಿ ವಾಪಸ್ ಪಡೆಯಲು ಹಲವು ವರ್ಷಗಳಿಂದ ಸುದೀರ್ಘ ಹೋರಾಟ ನಡೆಸಿದ್ದರು. ಇದೀಗ, ಕೃಷಿ ಸಚಿವ ಕೆ.ಕಣ್ಣ ಬಾಬು ನೇತೃತ್ವದ ಆರು ಸದಸ್ಯರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಕೆಎಸ್‌ಇ ಝೆಡ್ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಸ್ವಾಧೀನಪಡಿಸಿಕೊಂಡಿದ್ದ 2,180 ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರ ಆದೇಶಿಸಿದೆ.
ಪೂರ್ವ ಗೋದಾವರಿ ಜಿಲ್ಲೆಯ ಯು ಕೊಥಪಲ್ಲಿ ಮತ್ತು ತೊಂಡಂಗಿ ಮಂಡಲಗಳ ಅಡಿಯಲ್ಲಿ ಬರುವ ಹಲವಾರು ಹಳ್ಳಿಗಳನ್ನು ಒಳಗೊಂಡಂತೆ ಬಂದರು ಆಧಾರಿತ ಮಲ್ಟಿಪ್ರೊಡಕ್ಟ್ ಎಸ್‌ಇಝೆಡ್ ಸ್ಥಾಪಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು 2007 ರಲ್ಲಿ ಕೆಎಸ್‌ಇಝೆಡ್‌ಗೆ ಅಧಿಸೂಚನೆ ಹೊರಡಿಸಿತ್ತು. ಮುಖ್ಯವಾಗಿ ಭೂಮಿಗೆ ಸಂಬಂಧಿಸಿದ ಅನೇಕ ಬಗೆಹರಿಸಲಾಗದ ಸಮಸ್ಯೆಗಳಿಂದಾಗಿ ಕೆಎಸ್‌ಇ ಝೆಡ್ ಟೇಕಾಫ್ ಆಗಲು ಸಾಧ್ಯವಾಗಿರಲಿಲ್ಲ.
ವೈ ಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರವು ಕೆಎಸ್ಇಝೆಡ್ ಯೋಜನೆಗೆ ಸಂಬಂಧಿಸಿದಂತೆ ಸಂತ್ರಸ್ತ ರೈತರೊಂದಿಗೆ ಮಾತನಾಡಲು ಮತ್ತು ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಆರು ಸದಸ್ಯರ ಸಮಿತಿಯನ್ನು ರಚಿಸಿತ್ತು, ಸಮಿತಿ ತನ್ನ ಅಂತಿಮ ವರದಿಯನ್ನು ಕಳೆದ ತಿಂಗಳು ಸರ್ಕಾರಕ್ಕೆ ಸಲ್ಲಿಸಿದ್ದು, ಕ್ಯಾಬಿನೆಟ್ ಅದನ್ನು ಸಂಪೂರ್ಣವಾಗಿ ಅನುಮೋದಿಸಿದೆ.
ಅದರಂತೆ ಕೈಗಾರಿಕೆಗಳು ಮತ್ತು ಆಯುಕ್ತರ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಆರ್ ಕರಿಕಲ್ ವಾಲವೆನ್ ಅವರು ಶ್ರೀರಾಂಪುರಂ, ಬಡಿಪೇಟ, ಮುಮ್ಮಿಡಿವಾರಿಪಾಡು, ಪಟಿವಾರಿಪಾಲೆಂ, ರವಿವಾರಿಪಾಡು ಮತ್ತು ರಾಮರಾಘವಪುರಂ (ಭಾಗ) ಗ್ರಾಮಗಳ ನಿವಾಸಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಅಗತ್ಯ ಬಿದ್ದರೆ ಮಾತ್ರ, ರಾಮರಾಘವಪುರಂನ ಜನರನ್ನು ರವಿವರಿಪಾಡು ಗ್ರಾಮಕ್ಕೆ ಸ್ಥಳಾಂತರಿಸಬಹುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.