ಅಮರಾವತಿ: ‘ನನ್ನ ಕಾರ್ಯವೈಖರಿ ಕುರಿತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನೀಡಿರುವ ಹೇಳಿಕೆಯನ್ನು ನಾನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇನೆ’ ಎಂದು ಆಂಧ್ರ ಪ್ರದೇಶ ಗೃಹ ಸಚಿವೆ ವಂಗಲಪೂಡಿ ಅನಿತಾ ಮಂಗಳವಾರ ಹೇಳಿದರು.
ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರದಂಥ ಪ್ರಕರಣಗಳು ಹೆಚ್ಚಾಗಿವೆ ಎಂದು ಅನಿತಾ ಅವರ ಕಾರ್ಯವೈಖರಿಯನ್ನು ಟೀಕಿಸಿ ಪವನ್ ಕಲ್ಯಾಣ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.
ಟಿಡಿಪಿ, ಬಿಜೆಪಿ ಹಾಗೂ ಜನಸೇನಾ ಪಕ್ಷಗಳ ಮೈತ್ರಿ ಸರ್ಕಾರ ಆಂಧ್ರ ಪ್ರದೇಶದಲ್ಲಿದೆ. ತಮ್ಮದೇ ಸರ್ಕಾರದ ಸಚಿವರೊಬ್ಬರ ಕಾರ್ಯವೈಖರಿ ಕುರಿತು ಬಹಿರಂಗವಾಗಿ ಪವನ್ ಕಲ್ಯಾಣ್ ಅವರು ನೀಡಿರುವ ಕಟು ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅನಂತಪುರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅನಿತಾ ಅವರು, ‘ಪವನ್ ಅವರು ಯಾವ ಪ್ರಕರಣದ ಕುರಿತು ಸಿಟ್ಟಿನಿಂದ ಮಾತನಾಡಿದರು ಎಂದು ನನಗೆ ತಿಳಿದಿದೆ. ಅವರೊಂದಿಗೆ ಶೀಘ್ರದಲ್ಲಿಯೇ ಚರ್ಚಿಸುತ್ತೇನೆ’ ಎಂದರು.
‘ಪವನ್ ಕಲ್ಯಾಣ್ ಅವರು ನನ್ನ ಕೆಲಸಕ್ಕೆ ಅನುಕೂಲವಾಗುವ ರೀತಿಯಲ್ಲೇ ತಮ್ಮ ಮಾತುಗಳ ಮೂಲಕ ಹೇಳಿದ್ದಾರೆ. ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುವಂತೆ ಆಗ್ರಹಿಸಿದ್ದಾರೆ’ ಎಂದರು.
‘ಗೃಹ ಸಚಿವೆಯಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿವೆ ಮತ್ತು ಯಾವ ರೀತಿ ಕೆಲಸ ಮಾಡಬೇಕು ಎಂದೂ ತಿಳಿದಿದೆ. ಪವನ್ ಕಲ್ಯಾಣ್ ಅವರು ನನ್ನನ್ನು ವಿಫಲ ಸಚಿವೆ ಎಂದೇನೂ ಬಿಂಬಿಸಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.