ತಿರುವನಂತಪುರ: ಕ್ಯಾನ್ಸರ್ ರೋಗಿಗಳಿಗೆ ಹಣಕಾಸಿನ ನೆರವಿನ ಜತೆಗೆ ಕೂದಲನ್ನು ದಾನ ಮಾಡುವ ಮೂಲಕ ಕೇರಳದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಯಾಗಿರುವ 44 ವರ್ಷದ ಅಪರ್ಣಾ ಲವಕುಮಾರ್ ಅವರು ಉದ್ದನೆಯ ಕೂದಲಿಗೆ ಹೆಸರಾಗಿ
ದ್ದರು. ಆದರೆ, ದಿಢೀರನೆ ಒಂದು ದಿನ ಕೂದಲು ಕತ್ತರಿಸಿಕೊಂಡು ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು.
‘ಬಡಕುಟುಂಬಕ್ಕೆ ಸೇರಿದ ಹಲವು ಕ್ಯಾನ್ಸರ್ ಪೀಡಿತ ಮಕ್ಕಳು ದುಬಾರಿ ವಿಗ್‌ಗಳನ್ನು ಖರೀದಿಸುವುದು ಅಸಾಧ್ಯವಾಗಿತ್ತು ಎನ್ನುವುದು ಮೂರು ವರ್ಷಗಳ ಹಿಂದೆ ನನ್ನ ಗಮನಕ್ಕೆ ಬಂತು. ಅಂದೇ ಕೂದ
ಲನ್ನು ದಾನ ಮಾಡಲು ನಿರ್ಧರಿಸಿದೆ’ ಎಂದು ಅಪರ್ಣಾ ಹೇಳುತ್ತಾರೆ.
‘ನನಗೆ ಸೌಂದರ್ಯ ಮುಖ್ಯವಲ್ಲ. ಅದು ಬದುಕಿನಲ್ಲಿ ಶಾಶ್ವತವೂ ಅಲ್ಲ. ಇದುವರೆಗೆ ತಲೆಯಲ್ಲಿನ ಅರ್ಧದಷ್ಟು ಕೂದಲು ಕತ್ತರಿಸಿಕೊಂಡು ದಾನ ಮಾಡುತ್ತಿದ್ದೆ. ಈ ಬಾರಿ, ಸಂಪೂರ್ಣ ನೀಡಿದ್ದೇನೆ. ಪೊಲೀಸ್ ಅಧಿಕಾರಿಯಾಗಿರುವುದ ರಿಂದ ಸಹಜವಾಗಿಯೇ ಕರ್ತವ್ಯದಲ್ಲಿದ್ದಾಗ ಪೊಲೀಸ್ ಟೋಪಿ ಧರಿಸಿ
ರುತ್ತೇನೆ. ತಲೆಯನ್ನು ಸಂಪೂರ್ಣ ಬೋಳಿಸಿಕೊಳ್ಳಲು ಹಿರಿಯ ಅಧಿಕಾರಿ ಗಳು ಅನುಮತಿ ನೀಡಿದ್ದಾರೆ. ಇನ್ನೊಬ್ಬರಿಗೆ ನೆರವು ನೀಡುವವರಿಗೆ ದೇವರ ಆಶೀರ್ವಾದ ಇರುತ್ತದೆ’ ಎಂದು ವಿನಯಪೂರ್ವಕವಾಗಿ ಹೇಳುತ್ತಾರೆ.
ಈ ಮಾನವೀಯ ಕೈಂಕರ್ಯಕ್ಕೆ ಕುಟುಂಬದ ಸದಸ್ಯರು ಬೆಂಬಲವಾಗಿ ನಿಂತಿದ್ದಾರೆ. ಈ ಕಾರ್ಯದಿಂದ ಸ್ಫೂರ್ತಿಗೊಂಡ ಅಪರ್ಣಾ ಅವರ ಇಬ್ಬರು ಪುತ್ರಿಯರು ಸಹ ನಿಯಮಿತವಾಗಿ ಕೂದಲನ್ನು ದಾನ ಮಾಡುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಾಗ ಆಸ್ಪತ್ರೆಬಿಲ್ ಅನ್ನು ಅಪರ್ಣಾ ಅವರೇ ಪಾವತಿಸಿ ಗಮನಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.