ನವದೆಹಲಿ: ಉತ್ತರದ ಗಡಿ ಕಾಯುವ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಡಿಐಜಿ ಆಗಿರುವ ಅಪರ್ಣಾ ಕುಮಾರ್ ದಕ್ಷಿಣ ಧ್ರುವ ಮುಟ್ಟಿದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎನ್ನುವ ಶ್ರೇಯವನ್ನು ತಮ್ಮದಾಗಿಸಿಕೊಂಡಿದ್ದಾರೆ.
35 ಕೆ.ಜಿ. ತೂಕದ ಉಪಕರಣಗಳನ್ನು ಹೊತ್ತು ಹಿಮದ ಮೇಲೆ 111 ಕಿ.ಮೀ. ನಡೆದು ಅಪರ್ಣಾ ಕುಮಾರ್ ದಕ್ಷಿಣ ಧ್ರುವವನ್ನು ತಲುಪಿದ್ದರು. ಜ.13ರಂದು ದಕ್ಷಿಣ ಧ್ರುವ ಮುಟ್ಟಿದ ಅಪರ್ಣಾ ಕುಮಾರ್, ರಾಷ್ಟ್ರಧ್ವಜ ಮತ್ತು ಐಟಿಬಿಪಿ ಧ್ವಜಗಳನ್ನು ಹಾರಿಸಿ ಸಂಭ್ರಮಿಸಿದ್ದರು.
ಅಪರ್ಣಾ ಅವರನ್ನು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಐಟಿಬಿಪಿಯ ಉನ್ನತ ಅಧಿಕಾರಿಗಳು ಸ್ವಾಗತಿಸಿದರು. ಐಟಿಬಿಪಿಯ ಮಹಿಳಾ ಬ್ಯಾಂಡ್ ಸ್ವಾಗತ ಗೀತೆಗಳನ್ನು ನುಡಿಸಿ, ಹೂಗುಚ್ಛ ನೀಡಿ ಗೌರವಿಸಿತು.ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಧಕಿಯನ್ನು ಅಭಿನಂದಿಸಿದ್ದಾರೆ.
ವಿಶ್ವದ ಆರು ಖಂಡಗಳ ಅತಿ ಎತ್ತರದ ಪರ್ವತಗಳನ್ನು ಹತ್ತಿ ದಾಖಲೆ ಮಾಡಿರುವಉತ್ತರ ಪ್ರದೇಶ ಕೇಡರ್‌ನ 2002ನೇ ಬ್ಯಾಚ್ ಐಪಿಎಸ್ ಅಧಿಕಾರಿ ಅಪರ್ಣಾ ಡೆಹ್ರಾಡೂನ್‌ನಲ್ಲಿರುವ ಐಟಿಬಿಪಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವದ ವಿವಿಧೆಡೆ 211 ಯಶಸ್ವಿ ಪರ್ವತಾರೋಹಣ ಚಾರಣಗಳನ್ನು ಮಾಡಿರುವ ಐಟಿಬಿಪಿ ದಾಖಲೆ ಬರೆದಿದೆ. 1962ರಂದು ಅಸ್ತಿತ್ವಕ್ಕೆ ಬಂದ ಐಟಿಬಿಪಿ ಹಿಮಾಲಯದ ಗಡಿಗುಂಟ ದೇಶ ಕಾಯುವ ಹೊಣೆ ನಿರ್ವಹಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.