ನವದೆಹಲಿ: ಮಣಿಪುರದಲ್ಲಿ ಸದ್ಯದ ಸ್ಥಿತಿಗತಿ ಕುರಿತು ಚರ್ಚೆ ನಡೆಸಲು ವಿಪಕ್ಷಗಳನ್ನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಭಾನುವಾರ ಮನವಿ ಮಾಡಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದೂ ವಿಪಕ್ಷಗಳಿಗೆ ಠಾಕೂರ್ ವಿನಂತಿ ಮಾಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಂದು ಆರಂಭವಾಗಿತ್ತು. ಆದರೆ, ಮಹಿಳೆಯರನ್ನು ಬೆತ್ತಲುಗೊಳಿಸಿ, ಮೆರವಣಿಗೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ್ದ ಕೃತ್ಯ ಸೇರಿದಂತೆ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಸಂಸತ್ತಿನೊಳಗೆ ವಿವರವಾದ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿತ್ತು. ಇದರಿಂದಾಗಿ ಕಲಾಪಕ್ಕೆ ಅಡಿಯಾಗಿತ್ತು
ಮತ್ತೊಂದೆಡೆ ಮಣಿಪುರದ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳ ಒಕ್ಕೂಟವು ಸಂಸತ್ತಿನ ಸಂಕೀರ್ಣದ ಬಳಿ ಇರುವ ಗಾಂಧಿ ಪ್ರತಿಮೆಯ ಬಳಿ ಸೋಮವಾರ ಜಂಟಿಯಾಗಿ ಧರಣಿ ನಡೆಸಲು ತೀರ್ಮಾನ ಕೈಗೊಂಡಿವೆ.
ಮಹಿಳೆಯರ ಮೇಲೆ ಯಾವುದೇ ರಾಜ್ಯದಲ್ಲಿ ದೌರ್ಜನ್ಯ ನಡೆದರೂ ಅದು ತುಂಬಾ ನೋವಿನ ಸಂಗತಿಯಾಗಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದು ರಾಜ್ಯದ ಹೊಣೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಣಿಪುರದಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಠಾಕೂರ್ ಹೇಳಿದರು.
ಸದನದಲ್ಲಿ ಧನಾತ್ಮಕ ಚರ್ಚೆ ನಡೆಯಬೇಕು ಎಂದು ಬಯಸುತ್ತೇವೆ. ಚರ್ಚೆಯಿಂದ ಯಾರೂ ಪಲಾಯನ ಮಾಡಬಾರದು ಎಂದು ವಿಪಕ್ಷಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.