ADVERTISEMENT

ಕೈಮುಗಿದು ಕೇಳುವೆ ಮಾತುಕತೆಗೆ ಬನ್ನಿ; ರೈತರಿಗೆ ಪ್ರಧಾನಿ ಮೋದಿ ಆಹ್ವಾನ

ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ, ವಿರೋಧ ಪಕ್ಷಗಳಿಗೆ ತರಾಟೆ

ಪಿಟಿಐ
Published 18 ಡಿಸೆಂಬರ್ 2020, 19:30 IST
Last Updated 18 ಡಿಸೆಂಬರ್ 2020, 19:30 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಭೋಪಾಲ್‌: ‘ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರ ಜತೆ ಮಾತುಕತೆಗೆ ಸರ್ಕಾರ ಸಿದ್ಧವಿದೆ. ರೈತರ ಎದುರು ಕೈಜೋಡಿಸಿ, ತಲೆಬಾಗಿಸಿ ನಾನು ಈ ಮಾತು ಹೇಳುತ್ತಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ನಡೆಸಿದ ವರ್ಚುವಲ್ ಭಾಷಣದಲ್ಲಿ ಮೋದಿ ಅವರು ಈ ಮಾತು ಹೇಳಿದ್ದಾರೆ.

ಕೃಷಿ ಕಾಯ್ದೆಗಳನ್ನು ರಾತ್ರೋರಾತ್ರಿ ರಚಿಸಿಲ್ಲ. ಹಲವು ದಶಕಗಳಿಂದ ರೈತರು, ರೈತ ಸಂಘಟನೆಗಳು, ಪರಿಣತರ ಜತೆ ನಡೆಸಿದ ಸಮಾಲೋಚನೆಯ ಫಲವಾಗಿ ನೂತನ ಕೃಷಿ ಸುಧಾರಣಾ ಕಾಯ್ದೆಗಳು ರೂಪುಗೊಂಡಿವೆ ಎಂದು ಅವರು ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

20-22 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸುಧಾರಣೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿವೆ. ಇಂತಹ ಸುಧಾರಣೆ ಬೇಕು ಎಂದು ರೈತರು, ರೈತ ಸಂಘಟನೆಗಳು ಮತ್ತು ಕೃಷಿ ವಿಜ್ಞಾನಿಗಳು ಸತತವಾಗಿ ಬೇಡಿಕೆ ಇಡುತ್ತಲೇ ಇದ್ದರು. ಈ ಸುಧಾರಣೆಗಳು ಕಾಯ್ದೆಗಳಾಗಿ ಹಲವು ತಿಂಗಳು ಕಳೆದಿವೆ. ಆದರೆ ಅವನ್ನು ವಿರೋಧ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಜಾರಿಗೆ ತರುತ್ತಿಲ್ಲ
ಎಂದು ಮೋದಿ ಅವರು ಆರೋಪಿಸಿದ್ದಾರೆ.

‘ಈ ಕಾಯ್ದೆಗಳಿಂದ ರೈತರಿಗೆ ಅನುಕೂಲಗಳೇ ಆಗುತ್ತವೆ. ಮೋದಿ ಈ ಸುಧಾರಣೆಗಳನ್ನು ತಂದಿದ್ದಾನೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಇವನ್ನು ವಿರೋಧಿಸುತ್ತಿವೆ’ ಎಂದು ಪ್ರಧಾನಿ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳೆಲ್ಲವೂ ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಕೃಷಿ ಸುಧಾರಣಾ ಕಾಯ್ದೆಗಳ ಬಗ್ಗೆ ಭರವಸೆ ನೀಡಿದ್ದವು. ಅಂತಹ ಸುಧಾರಣೆಗಳನ್ನು ಅವರು ಜಾರಿಗೆ ತರಲೇ ಇಲ್ಲ. ಆದರೆ ಈಗ ಈ ಕಾಯ್ದೆಗಳನ್ನು ವಿರೋಧಿಸುತ್ತಿವೆ. ಮೋದಿ ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದಾನೆ ಎಂಬುದನ್ನು, ಮೋದಿಗೆ ಈ ಸುಧಾರಣೆಯ ಶ್ರೇಯ ಸಲ್ಲುತ್ತದೆ ಎಂಬುದನ್ನು ವಿರೊಧ ಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ರೈತರನ್ನು ಹಾದಿತಪ್ಪಿಸುತ್ತಿವೆ ಎಂದು ಮೋದಿ ಅವರು ಆರೋಪಿಸಿದ್ದಾರೆ.

ಮಹಾರಾಷ್ಟ್ರ ರೈತರ ಬೆಂಬಲ (ಮುಂಬೈ ವರದಿ): ಮಹಾರಾಷ್ಟ್ರದ 20ಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ರೈತರು ಇದೇ 21ರಂದು (ಸೋಮವಾರ) ನಾಸಿಕ್‌ನಲ್ಲಿ ಜಮಾಯಿಸಲಿದ್ದಾರೆ. ಅಲ್ಲಿಂದ ಅವರು ವಾಹನಗ ಜಾಥಾ ಮೂಲಕ ದೆಹಲಿಗೆ ತೆರಳಿ, ಅಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸೇರಿಕೊಳ್ಳಲಿದ್ದಾರೆ ಎಂದು ಆಲ್‌ ಇಂಡಿಯಾ ಕಿಸಾನ್‌ ಸಭಾ ಹೇಳಿದೆ.

ರೈತರು 1,266 ಕಿ.ಮೀ. ಕ್ರಮಿಸಿ, ಇದೇ 24ರಂದು ದೆಹಲಿ ತಲುಪಲಿದ್ದಾರೆ. 21ರಂದು ಸಂಜೆ ನಾಸಿಕ್‌ನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ವಾಹನ ಜಾಥಾವು ಮಧ್ಯ ಪ್ರದೇಶ ಪ್ರವೇಶಿಸುವ ಮುನ್ನ ನಾಸಿಕ್‌ ಮತ್ತು ಧುಲೆ ಜಿಲ್ಲೆಗಳ ವಿವಿಧೆಡೆ ಭಾರಿ ಸ್ವಾಗತ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್‌ ಸಭಾದ ಅಧ್ಯಕ್ಷ ಡಾ. ಅಶೋಕ್ ಧವಳೆ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಉಪವಾಸ (ಚೆನ್ನೈ ವರದಿ): ತಮಿಳುನಾಡಿನ ವಿರೋಧ ಪಕ್ಷ ಡಿಎಂಕೆ ಮತ್ತು ಮಿತ್ರಪಕ್ಷಗಳು, ರೈತರ ಹೋರಾಟಕ್ಕೆ ಬೆಂಬಲವಾಗಿ ಶುಕ್ರವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿವೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ವಲ್ಲುವರ್‌ ಕೊಟ್ಟಂನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರು ಪುದುಚೇರಿಯಲ್ಲಿ ನಡೆದ ನಿರಶನದ ನೇತೃತ್ವ ವಹಿಸಿದ್ದರು.

‘ಬೆಂಬಲ ಬೆಲೆ ರದ್ದಾಗದು’
ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ತಮ್ಮ ಸರ್ಕಾರ ರದ್ದುಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

‘ನಮ್ಮ ಸರ್ಕಾರವು ರೈತರನ್ನು ಅನ್ನದಾತರು ಎಂದು ಪರಿಗಣಿಸುತ್ತದೆ. ಬೆಳೆಗೆ ಆಗುವ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ಮೊತ್ತದಷ್ಟು ಎಂಎಸ್‌ಪಿ ನೀಡುತ್ತಿದ್ದೇವೆ. ಇದು ಮುಂದುವರಿಯಲಿದೆ. ನಮ್ಮ ಸರ್ಕಾರವು ಬಿತ್ತನೆಗೆ ಮುನ್ನವೇ ಆ ಋತುವಿನ ಎಂಎಸ್‌ಪಿಯನ್ನು ಪ್ರಕಟಿಸುತ್ತದೆ. ಆರು ತಿಂಗಳಲ್ಲಿ ದೇಶದಲ್ಲಿ ಒಂದು ಎಪಿಎಂಸಿ ಮಂಡಿಯನ್ನೂ ಮುಚ್ಚಿಲ್ಲ. ಬದಲಿಗೆ ₹500 ಕೋಟಿ ವೆಚ್ಚದಲ್ಲಿ ಎಪಿಎಂಸಿ ಮಂಡಿಗಳನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ವರ್ಷದ ಕೊನೆಯೊಳಗೆ ಪರಿಹಾರ’
ರೈತರ ಪ್ರತಿಭಟನೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಈ ವರ್ಷದ ಕೊನೆಯೊಳಗೆ ಪರಿಹರಿಸುವ ವಿಶ್ವಾಸವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವ್ಯಕ್ತಪಡಿಸಿದ್ದಾರೆ. ರೈತರ ವಿವಿಧ ಗುಂಪುಗಳ ಜತೆಗೆ ಅನೌಪಚಾರಿಕ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮೂರು ಕಾಯ್ದೆಗಳನ್ನು ರದ್ದುಪಡಿಸುವುದನ್ನು ಬಿಟ್ಟು ಬೇರೆ ಯಾವುದೇ ಪರಿಹಾರಸೂತ್ರವನ್ನು ರೈತರು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ, ರೈತರ ಸಂಘಟನೆಗಳ ಪ್ರತಿನಿಧಿಗಳ ಜತೆಗೆ ಔಪಚಾರಿಕವಾಗಿ ನಡೆಸಿದ ಮಾತುಕತೆಗಳು ವಿಫಲವಾಗಿವೆ.

ರೈತ ಸಮುದಾಯದ ಪ್ರಾಮಾಣಿಕ ಕಳವಳಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ಔಪಚಾರಿಕ ಮಾತುಕತೆಯನ್ನು ಯಾವುದೇ ಕ್ಷಣದಲ್ಲಿ ಆರಂಭಿಸಲು ಸಿದ್ಧ. ಆದರೆ, ‘ರೈತರ ಹೆಗಲ ಮೇಲಿನಿಂದ ಗುಂಡು ಹಾರಿಸುತ್ತಿರುವವರ’ ಜತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ತೋಮರ್‌ ಹೇಳಿದ್ದಾರೆ.

ರೈತರಿಗೆ ₹50 ಲಕ್ಷ ಬಾಂಡ್‌ನ ನೋಟಿಸ್‌
ಭಾರತೀಯ ಕಿಸಾನ್‌ ಯೂನಿಯನ್‌ನ ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲಾ ಘಟಕದ ಆರು ಮುಖಂಡರಿಗೆ ₹50 ಲಕ್ಷದ ವೈಯಕ್ತಿಕ ಬಾಂಡ್‌ ನೀಡುವಂತೆ ನೋಟಿಸ್‌ ನೀಡಲಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸೇರುವಂತೆ ರೈತರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಮತ್ತು ಈ ಮೂಲಕ ಶಾಂತಿಗೆ ಭಂಗ ತರಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಆದರೆ, ಇದು ಅಕ್ಷರ ತಪ್ಪಿನಿಂದ ಆಗಿರುವ ಲೋಪ. ಈ ನೋಟಿಸ್‌ ಸಿದ್ಧಪಡಿಸಿದ ಕ್ಲರ್ಕ್‌ ₹5 ಲಕ್ಷವನ್ನು ತಪ್ಪಾಗಿ ₹50 ಲಕ್ಷ ಎಂದು ನಮೂದಿಸಿದ್ದಾರೆ. ರೈತರಿಗೆ ಹೊಸ ನೋಟಿಸ್‌ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಇನ್ನೂ ಆರು ರೈತರಿಗೆ ಇಂತಹ ನೋಟಿಸ್ ನೀಡಿದ್ದೇವೆ. ಅದರಲ್ಲಿ ₹5 ಲಕ್ಷ ಎಂದೇ ಇದೆ ಎಂದು ಸ್ಪಷ್ಟಪಡಿಸಿದೆ.

ಇಂತಹ ನೋಟಿಸ್‌ ನೀಡುವುದಕ್ಕೆ ಅಪರಾಧ ಪ್ರಕ್ರಿಯಾ ಸಂಹಿತೆಯ 111ನೇ ಸೆಕ್ಷನ್‌ ಅಡಿಯಲ್ಲಿ ಜಿಲ್ಲಾಧಿಕಾರಿಗೆ ಅಧಿಕಾರ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈತರು ಪ್ರತಿಭಟನೆ ನಡೆಸುವುದನ್ನು ತಡೆಯುವುದಕ್ಕಾಗಿಯೇ ಈ ನೋಟಿಸ್‌ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ. ಆದರೆ, ‘ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಅದನ್ನು ಯಾರೂ ಕಸಿದುಕೊಳ್ಳಲಾಗದು’ ಎಂದು ಸಂ‌ಭಾಲ್‌ ಜಿಲ್ಲೆಯ ರೈತರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.