ADVERTISEMENT

ಆ್ಯಪಲ್‌ ಎಚ್ಚರಿಕೆ: ಬಿಜೆಪಿ–ವಿಪಕ್ಷಗಳ ಜಟಾಪಟಿ ಜೋರು

ಪಿಟಿಐ
Published 1 ನವೆಂಬರ್ 2023, 16:23 IST
Last Updated 1 ನವೆಂಬರ್ 2023, 16:23 IST
ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ   

ನವದೆಹಲಿ : ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು’ ತಮ್ಮ ಐಫೋನ್‌ ಹ್ಯಾಕ್‌ ಮಾಡಲು ಪ್ರಯತ್ನಿಸುತ್ತಿರುವ ಕುರಿತು ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಬುಧವಾರ ಸಜ್ಜಾಗಿವೆ.

ಆ್ಯಪಲ್‌ ಕಂಪನಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಸಂಸದರ ಹಕ್ಕುಗಳನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಈ ವಿಷಯ ಕುರಿತು ಸಮಗ್ರ ಪರಿಶೀಲನೆಗಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಕುರಿತ ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಕರೆಯುವಂತೆ ಇತರ ವಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

ಇನ್ನೊಂದೆಡೆ, ವಿರೋಧ ಪಕ್ಷಗಳ ವಾದವನ್ನು ಖಂಡಿಸಿರುವ ಬಿಜೆಪಿ ನಾಯಕರು, ‘ಐಫೋನ್‌ ಹ್ಯಾಕ್‌ ಯತ್ನ ಕುರಿತ ಎಚ್ಚರಿಕೆ ಸಂದೇಶಗಳು ಹಾಗೂ ಜಾರ್ಜ್‌ ಸೊರೋಸ್ ಪ್ರಾಯೋಜಿತ ‘ಆ್ಯಕ್ಸೆಸ್‌ ನೌ’ ಸಂಸ್ಥೆ ನಡುವೆ ನಂಟಿದೆ. ಇದೇ ಕಾರಣಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಈ ವಿಷಯ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ’ ಎಂದು ಕುಟುಕಿದ್ದಾರೆ.

ADVERTISEMENT

ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವ ಕುರಿತು ಚರ್ಚಿಸಲು ಕೂಡಲೇ ಸಭೆ ನಡೆಸುವಂತೆ ಕೋರಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಪ‍್ರತಾಪ್‌ರಾವ್ ಜಾಧವ್ ಅವರಿಗೆ ಸಂಸದರಾದ ಕಾಂಗ್ರೆಸ್‌ನ ಕಾರ್ತಿ ಚಿದಂಬರಂ ಹಾಗೂ ಸಿಪಿಎಂನ ಜಾನ್‌ ಬ್ರಿಟ್ಟಾಸ್‌ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರು ಕೂಡ ಜಾಧವ್‌ ಅವರಿಗೆ ಪತ್ರ ಬರೆದಿದ್ದು, ‘ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿರುವವರು ಹಾಗೂ ಆ್ಯಪಲ್‌ ಕಂಪನಿ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಬೇಕು’ ಎಂದು ಒತ್ತಾಯಿಸಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.

‘ಆ್ಯಪಲ್‌ ಕಂಪನಿ ಎಚ್ಚರಿಕೆ ನೀಡಿರುವುದು, ಪೆಗಾಸಸ್‌ ಪ್ರಕರಣದ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳತ್ತ ಮತ್ತೊಮ್ಮೆ ಸಂಶಯದಿಂದ ನೋಡುವಂತಾಗಿದೆ.  ಆದರೆ, ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸಿದ್ದೇಕೆ? ವಿರೋಧ ಪಕ್ಷಗಳ ನಾಯಕರ ಫೋನ್‌ಗಳಲ್ಲಿನ ಮಾಹಿತಿ ಕಳ್ಳತನ ಮಾಡಲು ಯಾರು ಆಸಕ್ತಿ ಹೊಂದಿದ್ದಾರೆ’ ಎಂದು ಚಿದಂಬರಂ ಪ್ರಶ್ನೆ ಮಾಡಿದ್ದಾರೆ.

ಐ.ಟಿ ಕುರಿತ ಸ್ಥಾಯಿ ಸಮಿತಿ ಸಭೆ ಕರೆಯಬೇಕು ಎಂಬ ವಿಪಕ್ಷಗಳ ಬೇಡಿಕೆ ಕುರಿತು ಬಿಜೆಪಿ ಸಂಸದ‌ ಹಾಗೂ ಸಮಿತಿ ಸದಸ್ಯರಾದ ನಿಶಿಕಾಂತ್‌ ದುಬೆ ಪ್ರತಿಕ್ರಿಯಿಸಿದ್ದು, ‘ಸ್ಥಾಯಿ ಸಮಿತಿಯು ಈ ವಿಷಯ ಕುರಿತು ಚರ್ಚೆ ನಡೆಸುವುದು ಸಾಧ್ಯವಿಲ್ಲ’ ಎಂದಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ದುಬೆ, ‘ಆ್ಯಪಲ್‌ ಕಂಪನಿಯ ಎಚ್ಚರಿಕೆ ವಿಷಯವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ, ಹ್ಯಾಕ್‌ಗೆ ಸಂಬಂಧಿಸಿದ ಆರೋಪಗಳ ಕುರಿತು ರಾಜ್ಯಗಳ ಪೊಲೀಸರು ಪರಿಶೀಲನೆ ನಡೆಸಬೇಕಾಗುತ್ತದೆ’ ಎಂದಿದ್ದಾರೆ.

‘ಈ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಯಾರಾದರೂ ದೂರು ಕೊಟ್ಟಲ್ಲಿ ಸಮಿತಿಯು ಪರಿಶೀಲಿಸಿ, ಸೂಕ್ತ ಕ್ರಮ ‌ಕೈಗೊಳ್ಳಲಿದೆ’ ಎಂದು ಜಾಧವ್‌ ಪ್ರತಿಕ್ರಿಯಿಸಿದ್ದಾರೆ.

ನಿಶಿಕಾಂತ್‌ ದುಬೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.