ADVERTISEMENT

ಲಸಿಕೆಗೆ ಅನುಮತಿ: ಬ್ರಿಟನ್‌ ಮೇಲೆ ಅವಲಂಬನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 20:59 IST
Last Updated 24 ಡಿಸೆಂಬರ್ 2020, 20:59 IST
   

ನವದೆಹಲಿ: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಸಂಸ್ಥೆಯು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌–19 ತಡೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಪುಣೆಯ ಲಸಿಕೆ ತಯಾರಿಕಾ ಸಂಸ್ಥೆ ಸೆರಂ ಇನ್ಸ್‌ಟಿಟ್ಯೂಟ್‌ ಅರ್ಜಿ ಸಲ್ಲಿಸಿ ಮೂರು ವಾರಗಳಾಗಿವೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಈ ಲಸಿಕೆಯು ಅಭಿವೃದ್ಧಿಯಾದ ಬ್ರಿಟನ್‌ನಆರೋಗ್ಯ ರಕ್ಷಣೆ ಉತ್ಪನ್ನ ನಿಯಂತ್ರಣ ಸಂಸ್ಥೆಯ (ಎಂಎಚ್‌ಆರ್‌ಎ) ಅನುಮೋದನೆಯು ದೊರೆಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಭಾರತದಲ್ಲಿ ಈ ಲಸಿಕೆಯನ್ನುಸೆರಂ ಸಂಸ್ಥೆಯು ತಯಾರಿಸಲಿದೆ. ಆದರೆ, ತುರ್ತು ಬಳಕೆಗೆ ಅನುಮತಿ ನೀಡುವ ಮುನ್ನ, ವಿದೇಶಗಳಲ್ಲಿ ನಡೆದ‍ಪ್ರಯೋಗಗಳಲ್ಲಿನ ಪರಿಣಾಮಕಾರಿತ್ವದ ದತ್ತಾಂಶವನ್ನು ಪರಿಶೀಲಿಸಲು ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಬಯಸಿದೆ. ಭಾರತದಲ್ಲಿ 1,600 ಮಂದಿ ಮೇಲೆ ಈ ಲಸಿಕೆಪ್ರಯೋಗಿಸಲಾಗಿದೆ. ಇದು ಲಸಿಕೆಯ ಸುರಕ್ಷತೆ ಮತ್ತು ಭಾರತೀಯರಲ್ಲಿ ರೋಗನಿರೋಧಕ ಪ್ರತಿಕ್ರಿಯೆಯ ಪರೀಕ್ಷೆ ಮಾತ್ರ. ಪರಿಣಾಮ ಏನು ಎಂಬುದನ್ನು ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸಿಲ್ಲ.

ಹಾಗಾಗಿ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಬ್ರಿಟನ್‌ನ ಎಂಎಚ್‌ಆರ್‌ಎ ವರದಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಮನುಷ್ಯರ ಮೇಲೆ ಲಸಿಕೆ ಪ್ರಯೋಗದ ಕೊನೆಯ ಹಂತದ ದತ್ತಾಂಶವನ್ನು ಆಸ್ಟ್ರಾಜೆನೆಕಾ ಸಂಸ್ಥೆಯು ಮುಂದಿನ ವಾರ ಬ್ರಿಟನ್‌ ಸಂಸ್ಥೆಗೆ ಸಲ್ಲಿಸುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.