ವಯನಾಡು(ಕೇರಳ): ವಿನಾಶಕಾರಿ ಭೂಕುಸಿತ ಸಂಭವಿಸಿರುವ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈನಲ್ಲಿ ಮಳೆ ನಡುವೆಯೇ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈಗಲೂ ಸುಮಾರು 300 ಮಂದಿ ನಾಪತ್ತೆಯಾಗಿದ್ದಾರೆ ಎಂದು ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಹೇಳಿದ್ದಾರೆ.
ಈಗಾಗಲೇ ಮೃತರ ಸಂಖ್ಯೆ 200ರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಕುಮಾರ್ ಮಾಧ್ಯಮಗಳ ಜೊತ ಪ್ರತಿಕ್ರಿಯಿಸಿ, ಸುಮಾರು 300 ಮಂದಿ ಇನ್ನೂ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಎರಡು ಮೂರು ದಿನಗಳಲ್ಲಿ ಕಂದಾಯ ಇಲಾಖೆ ಈ ಕುರಿತ ಖಚಿತ ಸಂಖ್ಯೆಯನ್ನು ತಿಳಿಸಲಿದೆ ಎಂದು ಹೇಳಿದ್ದಾರೆ.
ಕೇರಳದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಅಧಾಕಾರಿ ಕುಮಾರ್, ಭೂಕುಸಿತ ಸಂಭವಿಸಿರುವ ಪ್ರದೇಶಗಳನ್ನು 6 ವಲಯಗಳಾಗಿ ವಿಂಗಡಿಸಿ ಶೋಧ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ, ಶ್ವಾನದಳಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನುರಿತ ಸಂಸ್ಥೆಗಳ ನೆರವು ಪಡೆದು ಚಲಿಯಾರ್ ನದಿಯಲ್ಲಿ ಕೋಯಿಕ್ಕೋಡ್‌ವರೆಗೂ ಪೊಲೀಸರು ಶೋಧ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
'ನಿನ್ನೆಯೂ ನಾವು ನದಿಯಲ್ಲಿ ಶೋಧ ನಡೆಸಿದ್ದೇವೆ. ಪೊಥುಕಲ್ ಬಳಿ ಮೃತದೇಹಗಳು ಪತ್ತೆಯಾಗಿವೆ. ಹಾಗಾಗಿ, ಆಯಾ ವ್ಯಾಪ್ತಿಯಲ್ಲಿ ಕೋಯಿಕ್ಕೋಡ್‌ವರೆಗೆ ಶೋಧ ನಡೆಸುವಂತೆ ನದಿ ಸಮೀಪದಲ್ಲಿ ಬರುವ ಠಾಣೆಗಳಿಗೆ ಸೂಚಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಮಲಪ್ಪುರಂ ಜಿಲ್ಲೆಯ ಚಲಿಯಾರ್ ನದಿ ದಡದಲ್ಲೂ ಮೃತದೇಹಗಳು ಸಿಕ್ಕಿರುವ ಬಗ್ಗೆ ವರದಿಯಾಗಿದೆ.
143 ಮೃತದೇಹಗಳು ಮತ್ತು ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ದೇಹದ ತುಂಡಾದ ಭಾಗಗಳನ್ನು ಸಂಗ್ರಹಿಸಲಾಗಿದೆ ಎಂದೂ ಅರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.